ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನ ಕಂಬಳಕ್ಕೆ ಬಂಗ ಅರಸರ ಕಾಲದ ಇತಿಹಾಸವಿರುವುದು ದೇವಳದಲ್ಲಿ ನಡೆಸಲಾಗಿದ್ದ ಪ್ರಶ್ನಾ ಚಿಂತನೆಯಿಂದ ತಿಳಿದು ಬಂದಿದೆ. ಶ್ರೀ ಮಹಾಲಿಂಗೇಶ್ವರ ದೇವರ ನಂಟಿನೊಂದಿಗೆ ಪುತ್ತೂರಿನಲ್ಲಿ ನಡೆಯುತ್ತಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಕಂಬಳ ಸಮಿತಿಯ ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದರು.ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ೩೨ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು. ಇಲ್ಲಿನ ಕಂಬಳ ವಿರುದ್ಧ ಮಾತನಾಡಿದವರು ಹೊರಹೋಗಿರುವ ನಿದರ್ಶನಗಳಿವೆ. ಯಾರೇ ಟೀಕೆ ಮಾಡಿದರೂ ಪುತ್ತೂರು ಕಂಬಳ ಸೂರ್ಯ-ಚಂದ್ರರಿರುವ ತನಕ ನಿರಂತರವಾಗಿ ವಿಜೃಂಭಣೆಯಿಂದ ನಡೆಯಲಿದೆ. ಟೀಕೆ ಮಾಡುವ ಮಂದಿ ಬೆರಳೆಣಿಕೆಯವರಾಗಿದ್ದರೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮಂದಿ ಸಹಸ್ತಾçರು ಮಂದಿ ಇದ್ದಾರೆ ಎಂದರು. ಸುದಾನ ದೇವಾಲಯದ ಧರ್ಮಗುರು ಫಾ.ವಿಜಯ ಹಾರ್ವಿನ್ ಮಾತನಾಡಿ, ಕಂಬಳವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ಪ್ರತಿಯೊಬ್ಬರಿಗೂ ಇದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಂಬಳ ಸಮಿತಿಯ ಸಂಚಾಲಕ ಕೆ.ವಸಂತ ಕುಮಾರ್ ರೈ ದುಗ್ಗಳ, ಚಾರ್ವಾಕ ಕಪಿಲೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿಯ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ವಿವಿಧ ಕ್ಷೇತ್ರದ ಪ್ರಮುಖರಾದ ಡಾ.ರಾಜಾರಾಮ್ ಕೆ.ಬಿ, ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ರೈ ಕಲ್ಲಡ್ಕ, ಸುಧೀರ್ ಶೆಟ್ಟಿ ನೇಸರ, ಸುಜಿತ್ ಶೆಟ್ಟಿ ನುಳಿಯಾಲು, ಜಯಂತ ನಡುಬೈಲು, ಮೌರೀಸ್ ಮಸ್ಕರೇನ್ಹಸ್, ಚಂದ್ರಪ್ರಭಾ ಗೌಡ, ವಲೇರಿಯನ್ ಡಯಾಸ್, ಸಾಹಿರಾ ದುಬೈರ್, ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಮತ್ತಿತರರು ಇದ್ದರು.
ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ಮತ್ತು ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.ಮಹಾಲಿಂಗೇಶ್ವರ ದೇವಳದಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಕಂಬಳ ಕೋಣಗಳೊಂದಿಗೆ ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಕಂಬಳಾಭಿಮಾನಿಗಳು ಮೆರವಣಿಗೆ ಮೂಲಕ ಕಂಬಳ ಕರೆಗೆ ಬಳಿಗೆ ತೆರಳಿ ಕಂಬಳಕ್ಕೆ ಚಾಲನೆ ನೀಡಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಹಾಗೂ ಕಂಬಳ ಸಮಿತಿಯ ಪ್ರಮುಖರ ಉಪಸ್ಥಿತಿಯಲ್ಲಿ ತೆಂಗಿನ ಕಾಯಿ ಒಡೆದು ಕಂಬಳಕ್ಕೆ ಚಾಲನೆ ನೀಡಿದರು. ಸುಡುಮದ್ದು ಪ್ರದರ್ಶನ ನಡೆಯಿತು.