ರಾಯಚೂರು: ಮಹಾಚೇತನರ ಬದುಕೇ ಸಮಾಜಕ್ಕೆ ಒಂದು ಸಂದೇಶದಂತಿರುತ್ತದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ತಿಳಿಸಿದರು.
ಇಲ್ಲಿನ ರಾಯಚೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.ತಾನು, ತಮ್ಮವರು ಎಂದು ಸ್ವಾರ್ಥಕ್ಕಾಗಿ ಬದುಕುವವರು ಒಂದು ಬಗೆಯಲ್ಲಿ ಮಾನಸಿಕ ಗುಲಾಮತನಕ್ಕೆ ಬಲಿಯಾದವರಾಗಿರುತ್ತಾರೆ. ಸ್ವಾಮಿ ವಿವೇಕಾನಂದರ ಬದುಕು ಮತ್ತು ಜೀವನ ಸಂದೇಶಗಳು ಯುವಕರಿಗೆ ಮುಖ್ಯವಾಗಿ ಜ್ಞಾನ, ಚಿಂತನಾ ಶೀಲತೆ, ಶಿಸ್ತು, ರಾಷ್ಟ್ರೀಯತೆ ಹಾಗೂ ಕಾಯಕಯೋಗವನ್ನು ತಿಳಿಸಿಕೊಡುತ್ತದೆ. ಈ ಎಲ್ಲಾ ವಿಚಾರಗಳನ್ನು ರೂಢಿಸಿಕೊಂಡಾಗಲೇ ವ್ಯಕ್ತಿಯಾಗಲಿ ಅಥವಾ ಸಮಾಜವಾಗಲಿ ಬೆಳೆಯಲು ಸಾಧ್ಯವಿದೆ ಎಂದರು.
ಸ್ವಾಮಿ ವಿವೇಕಾನಂದರ ಸಂದೇಶಗಳೂ ವಿಶೇಷವಾಗಿ ಯುವಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದವು. ಕಾಯಕ ಯೋಗ, ಆಧ್ಯಾತ್ಮದ ಮಹತ್ವದ ಜೊತೆಗೆ ರಾಷ್ಟ್ರೀಯತೆ ಯುವಕರಿಗೆ ಬೋಧಿಸಿದ ವಿವೇಕಾನಂದರು ಒಂದು ಬಗೆಯಲ್ಲಿ ಬೌದ್ಧಿಕ ಕ್ರಾಂತಿಯನ್ನೇ ಉಂಟುಮಾಡಿದರು ಎಂದರೆ ತಪ್ಪಾಗಲಿಕ್ಕಿಲ್ಲ. ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಸ್ವಾಮಿ ವಿವೇಕಾನಂದರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು. ಇದರ ಮೇಲೆಯೇ ಅವರ ಹಿರಿಮೆ ಎಷ್ಟಿತ್ತೆಂಬುದರ ಅರಿವಾಗುತ್ತದೆ. ಅವರ ಬದುಕು ಮತ್ತು ಸಂದೇಶ-ಚಿಂತನೆಗಳನ್ನು ವಯಸ್ಸಿನ ಮಿತಿಯಿಲ್ಲದೇ ನಾವು-ನೀವೆಲ್ಲರೂ ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.ವಿವಿ ಕುಲಸಚಿವ (ಪರಿಕ್ಷಾಂಗ) ಪ್ರೊ.ಯರಿಸ್ಬಾಮಿ.ಎಂ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರರಾಗಿದ್ದಾರೆ. ಇದೇ ಕಾರಣಕ್ಕೆ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣ ಇಂದಿಗೂ ಪ್ರಸ್ತುತ. ಆ ಭಾಷಣದಿಂದ ಇಡೀ ವಿಶ್ವವೇ ಭಾರತವನ್ನು ನೋಡುವ ದೃಷ್ಟಿಯೇ ಬದಲಾಯಿತು. ವಿಶ್ವದ ಮುಂದೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಸೇರಿದಂತೆ ಭಾರತೀಯತೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದ ಕೀರ್ತಿ ಅವರದು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಎಂದೆಂದಿಗೂ ಜೀವಂತ ಎಂದು ಹೇಳಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ಪ್ರಾಸ್ತಾವಿಕವಾಗಿ ಹಾಗೂ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಪದ್ಮಜಾ ದೇಸಾಯಿ ಮಾತನಾಡಿದರು.ಈ ಸಂದರ್ಭದಲ್ಲಿ ವಿಜ್ಞಾನ ನಿಕಾಯಗಳ ಡೀನ್ ಪ್ರೊ.ಭಾಸ್ಕರ್.ಪಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.