ಅಜೀಜಅಹ್ಮದ ಬಳಗಾನೂರ
ನಾಗಾಲ್ಯಾಂಡಿನ ಜಾಬ್ ಟಿಯರ್ಸ್ ಸಿರಿಧಾನ್ಯ ನೋಡಿದ್ದೀರಾ? ಮಧ್ಯಪ್ರದೇಶದ ಬೈಗಾ ಬುಡಕಟ್ಟು ನಿವಾಸಿಗಳು ಸೇವಿಸುವ ಸಿಖಿಯಾ ಸಿರಿಧಾನ್ಯ ಹೇಗಿರುತ್ತದೆ? ಖರೀದಿಸಲು ಬಗೆಬಗೆಯ ಸಿರಿಧಾನ್ಯಗಳ ಅಕ್ಕಿ ಎಲ್ಲಿ ಸಿಗಬಹುದು? ನಮ್ಮ ಹಳ್ಳಿಯಲ್ಲೂ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಹುಬ್ಬಳ್ಳಿಯ "ಸಿರಿಧಾನ್ಯ ಮೇಳ "ದಲ್ಲಿ ಉತ್ತರ ಲಭ್ಯ.
ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಹಾಗೂ ಜರ್ಮನಿಯ ಜಿಐಝಡ್ ಸಂಸ್ಥೆ ಸಹಯೋಗದಲ್ಲಿ ಅ. 14 ಮತ್ತು 15 ಎರಡು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಂಗಣದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಿರಿಧಾನ್ಯಗಳ ನೂರಾರು ತಳಿಗಳು ಪ್ರದರ್ಶನಕ್ಕೆ ಬರುವುದು ವಿಶೇಷ.ಸಿರಿಧಾನ್ಯಗಳಾದ ರಾಗಿ, ಸಾಮೆ, ನವಣೆ, ಸಜ್ಜೆ, ಜೋಳ, ಹಾರಕ, ಬರಗು, ಊದಲು, ಕೊರಲುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕ ಸಿರಿಧಾನ್ಯಗಳ ತವರೂರು. ಬರಗಾಲದಲ್ಲೂ ಹುಲುಸಾಗಿ ಬೆಳೆದು ಸಮೃದ್ದ ಫಸಲು ಕೊಡುವ ಸಿರಿಧಾನ್ಯಗಳು ಬರಗಾಲದ ಮಿತ್ರ ಎಂದೇ ಕರೆಸಿಕೊಂಡಿವೆ. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಸಿರಿಧಾನ್ಯಗಳು ಭಾರತದ ಭವಿಷ್ಯದ ಆಹಾರ ಮತ್ತು ಕೃಷಿ ಬೆಳೆ.
ಮಾರಾಟಕ್ಕೂ ಲಭ್ಯ:
ಎಂದಿನಂತೆ, ಹಣ್ಣಿನ ಗಿಡಗಳು, ಬಾಕಾಹು (ಬಾಳೆಕಾಯಿ ಹುಡಿ) ಪದಾರ್ಥಗಳು, ಸಾವಯವ ಬೀಜ, ಶುದ್ಧ ನೈಸರ್ಗಿಕ ಎಣ್ಣೆ, ಉಪ್ಪಿನಕಾಯಿ, ಐಸ್ ಕ್ರೀಂ, ಕರಕುಶಲ ಸಾಮಗ್ರಿಗಳು ಮಾರಾಟಕ್ಕೆ ಬರಲಿವೆ.
ಸಿರಿಧಾನ್ಯ ಅಡುಗೆ, ಚಿತ್ರಕಲಾ ಸ್ಪರ್ಧೆ:ಅ. 15ರಂದು ಮಧ್ಯಾಹ್ನ 12ಕ್ಕೆ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳ ಸ್ಪರ್ಧೆ ನಡೆಯಲಿದೆ. ಮನೆಯಲ್ಲಿ ತಯಾರಿಸಿದ ಬಗೆಬಗೆಯ ಅಡುಗೆಗಳನ್ನು ಸ್ಪರ್ಧೆಗೆ ತರಬಹುದು. ವಿಜೇತರಿಗೆ ಬಹುಮಾನ ನೀಡಲಾಗುವುದು. ಇದರ ಜತೆಗೆ, ಅಂದೇ ಬೆಳಗ್ಗೆ 10 ಗಂಟೆಗೆ ಮಕ್ಕಳಿಗಾಗಿ ‘ಸಿರಿಧಾನ್ಯಗಳ ಶ್ರೀಮಂತಿಕೆ’ ಕುರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಈ ಎರಡೂ ಸ್ಪರ್ಧೆಗಳಿಗೆ ಪ್ರವೇಶ ಉಚಿತ. ಅ. 14ರಂದು ಶನಿವಾರ ಸಂಜೆ 6 ಗಂಟೆಗೆ ಸಿರಿಧಾನ್ಯಗಳ ತಿನಿಸು ಸವಿದು, ಯಾವ ಧಾನ್ಯದಿಂದ ಅದನ್ನು ಮಾಡಲಾಗಿದೆ ಎಂದು ಊಹಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.
ಶಾಂತಕುಮಾರ ಸಿ.