ಇಸ್ರೇಲ್‌ ಯುದ್ಧ: ತಾಯ್ನಾಡಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ: ಪ್ರದೀಪ್ ಕೊಯಿಲ

KannadaprabhaNewsNetwork |  
Published : Oct 11, 2023, 12:45 AM IST
ಪ್ರದೀಪ್ ಕೊಯಿಲ | Kannada Prabha

ಸಾರಾಂಶ

ಯುದ್ಧ ನಡೆಯುತ್ತಿರುವ ಇಸ್ರೇಲ್‌ನಲ್ಲಿ ದ.ಕ. ಜಿಲ್ಲೆಯವರು ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದು, ಯುದ್ಧದ ನಡುವೆಯೂ ಎಲ್ಲರೂ ಇಲ್ಲಿ ಸುರಕ್ಷಿತವಾಗಿದ್ದಾರೆ. ಆದ್ದರಿಂದ ತಾಯ್ನಾಡಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಯುದ್ಧ ನಡೆಯುತ್ತಿರುವ ಇಸ್ರೇಲ್‌ನಲ್ಲಿ ದ.ಕ. ಜಿಲ್ಲೆಯವರು ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದು, ಯುದ್ಧದ ನಡುವೆಯೂ ಎಲ್ಲರೂ ಇಲ್ಲಿ ಸುರಕ್ಷಿತವಾಗಿದ್ದಾರೆ. ಆದ್ದರಿಂದ ತಾಯ್ನಾಡಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಸ್ರೇಲ್‌ನ ರೆಹೋವೊತ್ ಪ್ರದೇಶದಲ್ಲಿರುವ ಪುತ್ತೂರು ತಾಲೂಕಿನ ಕೆಮ್ಮಾರ ನಿವಾಸಿ ಪ್ರದೀಪ್ ಕೊಯಿಲ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಾಝಾ ಪಟ್ಟಿಯಿಂದ ನಾನಿರುವ ಪ್ರದೇಶ ಸುಮಾರು 55 ಕಿ.ಮೀ. ದೂರವಿದೆ. ಇಲ್ಲಿ ಯಾವುದೇ ಯುದ್ಧದ ವಾತಾವರಣ ಕಾಣುತ್ತಿಲ್ಲ. ಅದೇನಿದ್ದರು ಗಡಿ ಪ್ರದೇಶದಲ್ಲಿ. ಉಗ್ರರ ರಾಕೆಟ್ ಉಡಾವಣೆಯೇನಿದ್ದರೂ ನಡೆದಿದ್ದು ಗಡಿಗೆ ಹೊಂದಿಕೊಂಡಿರುವ ಪ್ರದೇಶ ಹಾಗೂ ಸಮುದ್ರ ತೀರದ ಮೇಲೆ. ಇಸ್ರೇಲ್‌ನಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾಗಿ ಶನಿವಾರ ಸಂಜೆಯವರೆಗೆ ವಾರದ ರಜಾ ದಿನವಾಗಿದ್ದು, ಅದಕ್ಕೆ ಸಬ್ಬತ್ ಅಥವಾ ಶಬ್ಬತ್ ಅನ್ನುತ್ತಾರೆ. ಈ ದಿನ ಅವರಿಗೆ ಪವಿತ್ರತೆ ಮತ್ತು ವಿಶ್ರಾಂತಿಯ ವಾರದ ದಿನವಾಗಿದೆ. ಆ ದಿನಗಳಂದು ಅವರಿಗೆ ಅವರದ್ದೇ ಆದ ಧಾರ್ಮಿಕ ಕಟ್ಟುಪಾಡುಗಳಿವೆ. ಅಲ್ಲದೇ, ಇಸ್ರೇಲ್‌ನಲ್ಲಿ ಒಂದು ವಾರದ ವಾರ್ಷಿಕ ಉತ್ಸವ ನಡೆಯುತ್ತದೆ. ತಮರ್ ಉತ್ಸವದಂದು ಇಸ್ರೇಲ್‌ನ ಅತೀ ದೊಡ್ಡ ಸಂಗೀತ ಉತ್ಸವವು ಡೆಡ್ ಸೀಯ ದಂಡೆಯಲ್ಲಿ ನಡೆಯುತ್ತದೆ. ಇದು ಶಬ್ಬತ್‌ನ ದಿನ ಬರುವುದಾಗಿದ್ದು, ಆ ಸಮಯವನ್ನು ನೋಡಿ ಉಗ್ರರು ದಾಳಿ ನಡೆಸಿದ್ದಾರೆ. ಆದ್ದರಿಂದ ಮೊದಲ ದಿನ ಹೆಚ್ಚಿನ ಸಾವು- ನೋವು ಸಂಭವಿಸಿದೆ. ಅಂದು ಇಸ್ರೇಲ್‌ನವರೆಲ್ಲಾ ಹಬ್ಬದ ಸಂಭ್ರಮದಲ್ಲಿದ್ದ ಕಾರಣ ತಕ್ಷಣದ ಪ್ರತಿರೋಧ ಸಿಕ್ಕಿಲ್ಲ. ಆ ಬಳಿಕ ಇಸ್ರೇಲ್ ಕೂಡಾ ಪ್ರತಿ ದಾಳಿ ನಡೆಸಿದ್ದು, ಈಗ ಉಗ್ರರ ದಾಳಿ ಕಡಿಮೆಯಾಗಿದೆ. ನಾನು ತಿಳಿದಾಗೆ ಉಗ್ರರ ಬಳಿ ಸುಧಾರಿತ ತಂತ್ರಜ್ಞಾನದ ರಾಕೆಟ್‌ಗಳಿಲ್ಲ. ಇಸ್ರೇಲ್ ಬಳಿ ರಾಕೆಟ್‌ಗಳ ದಾಳಿಯನ್ನು ತಡೆಯುವ ಐರನ್ ಡ್ಯಾಮ್ ಎಂಬ ತಂತ್ರಜ್ಞಾನವಿದ್ದು, ಅದರಿಂದ ರಾಕೆಟ್‌ಗಳ ದಾಳಿಯನ್ನು ತಡೆಯಲಾಗುತ್ತಿದೆ. ಒಮ್ಮೆಲೇ ಹಲವಾರು ರಾಕೆಟ್‌ಗಳನ್ನು ಹಾರಿಸಿದಾಗ ಈ ತಂತ್ರಜ್ಞಾನದಿಂದಲೇ ರಾಕೆಟ್‌ಗಳನ್ನು ಇಸ್ರೇಲ್ ತಡೆಯುತ್ತಿದ್ದು, ಅದರಲ್ಲಿ ಒಂದೆರಡು ರಾಕೆಟ್‌ಗಳು ತಪ್ಪಿಸಿಕೊಂಡು ಬಂದು ಬಿದ್ದು ಕೆಲವು ಕಡೆ ಹಾನಿಯಾಗುತ್ತಿದೆಯೇ ಹೊರತು ಬೇರೇನೂ ದೊಡ್ಡ ಮಟ್ಟದ ರಾಕೆಟ್ ದಾಳಿಗಳು ಇಸ್ರೇಲ್ ಮೇಲೆ ಈಗ ಆಗುತ್ತಿಲ್ಲ. ಇಲ್ಲಿ ಉಗ್ರರು ಮುಖ್ಯವಾಗಿ ಟಾರ್ಗೆಟ್ ಮಾಡಿರುವುದು ಐಟಿ ಕಚೇರಿ, ಮಾಲ್‌ಗಳು, ಪಾರ್ಕ್ ಹೀಗೆ ಜನಸಂದಣಿಯಿರುವ ಪ್ರದೇಶಗಳನ್ನು. ಅದು ಕೂಡಾ ಗಡಿಯಂಚಿನ ಪ್ರದೇಶಗಳಲ್ಲಿ ಮಾತ್ರ. ಗಡಿ ಪ್ರದೇಶವಾಗಿರುವ ಗಾಝಾಪಟ್ಟಿಯ ಬಳಿ ಯಹೂದಿಗಳ ಕೃಷಿ ಜಮೀನುಗಳಿದ್ದು ಅಲ್ಲಿ ಕೃಷಿ ಕೆಲಸಕ್ಕಿದ್ದ ಬಾಂಗ್ಲಾ ಹಾಗೂ ಭಾರತೀಯರನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಇದೆ ಎಂದು ತಿಳಿಸಿದರು. ಇಲ್ಲಿ ಹಲವು ಮಂದಿ ದ.ಕ. ಜಿಲ್ಲೆಯವರು ಇದ್ದರೂ, ನನ್ನ ಸಂಪರ್ಕದಲ್ಲಿ ಗಣೇಶ್ ಮತ್ತು ಕಡಬ ತಾಲೂಕಿನ ದಿನೇಶ್, ಉಮೇಶ್ ಎಂಬವರು ನೇರ ಸಂಪರ್ಕದಲ್ಲಿದ್ದಾರೆ. ಅವರು ಸೇರಿದಂತೆ ದ.ಕ. ಜಿಲ್ಲೆಯವರಿಗೆ ಇಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಹೂದಿಗಳಿಗೆ ಭಾರತೀಯರೆಂದರೆ ಬಹಳ ಅಭಿಮಾನವಿದ್ದು, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದ್ದರಿಂದ ಈ ಯುದ್ಧದಿಂದ ನಮಗೇನೂ ತೊಂದರೆ ಆಗಿಲ್ಲ. ಇವತ್ತು ಕೂಡಾ ನಾನು ನಿರ್ಭೀತಿಯಿಂದ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ