ಕನ್ನಡಪ್ರಭ ವಾರ್ತೆ ಧಾರವಾಡ
ಬುಧವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಮ್ಮ ಅಂಗರಕ್ಷಕನಿಂದಲೇ ಶೂ ಹಾಕಿಸಿಕೊಂಡ ಘಟನೆ ನಡೆಯಿತು.ಸಚಿವ ಡಾ. ಮಹದೇವಪ್ಪ, ಇಲ್ಲಿನ ಸಪ್ತಾಪುರ ಬಡಾವಣೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡುವ ಪೂರ್ವದಲ್ಲಿ ಕೆಲಕಾಲ ರಭಸದ ಮಳೆಯಾಗುತ್ತಿತ್ತು. ಮಳೆಯಲ್ಲೇ ಹಾಸ್ಟೇಲ್‌ಗೆ ಭೇಟಿ ನೀಡಿದ ಸಚಿವರು, ಅಲ್ಲಿನ ಅಡುಗೆ ಕೋಣೆ ಪರಿಶೀಲಿಸಲು ತೆರಳುವ ವೇಳೆ ತಾವು ಧರಿಸಿದ್ದ ಶೂಗಳನ್ನು ಹೊರಗಡೆ ಬಿಟ್ಟಿದ್ದರು. ಪರಿಶೀಲನೆಯ ನಂತರ ಹೊರಗೆ ಆಗಮಿಸಿದಾಗ ಅವರ ಅಂಗರಕ್ಷಕ ಸಚಿವರ ಕಾಲಿಗೆ ಶೂ ತೊಡಿಸಿದರು.
ಸಚಿವರ ಸ್ಷಪ್ಟನೆ:ಈ ಘಟನೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಮಹಾದೇವಪ್ಪ, ಅಂಗರಕ್ಷಕರಿಂದ ಶೂ ಹಾಕಿಸಿಕೊಂಡಿದ್ದಾರೆ ಎಂಬ ಸಂಗತಿ ವಿವಾದ ಪಡೆದಿರುವುದು ದುರದೃಷ್ಟಕರ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಈ ಹಿಂದೆ Hip joint knee ತೊಂದರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಇದರಿಂದ ಬಾಗಿ ಶೂ ಹಾಕಿಕೊಳ್ಳುವುದು ಕಷ್ಟ. ಆದಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ. ಬಹು ವರ್ಷಗಳ ಕಾಲ ನನ್ನೊಡನೆಯೇ ನನ್ನ ಕುಟುಂಬದ ಸದಸ್ಯನಂತೆ ಇರುವ ನಮ್ಮ ಕೆಲ ಸಿಬ್ಬಂದಿಗಳ ಬಳಿ ಕಾಲಿನ ಸಮಸ್ಯೆಯ ಹಿನ್ನೆಲೆಯಲ್ಲಿ ಪಡೆದುಕೊಂಡಿರುವ ಸಹಾಯ ಇದು. ಇದು ಮಾನವೀಯ ನೆಲೆಯಿಂದ ಕೂಡಿದೆ. ಇದಕ್ಕೆ ಅನಗತ್ಯವಾಗಿ ಇದಕ್ಕೆ ಅಹಂಕಾರ, ಅಧಿಕಾರದ ಅಮಲು ಎಂಬ ಶಬ್ದ ಬಳಸುವುದು ಸರಿಯಾದ ಕ್ರಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲತಃ ಸಂವಿಧಾನದ ಆಶಯಗಳ ಪ್ರಕಾರವೇ ಬದುಕುವ ನನಗೆ ಸಮಾನತೆ, ವ್ಯಕ್ತಿ ಗೌರವ, ಪ್ರೀತಿ ವಿಶ್ವಾಸ ಹೊರತು ಪಡಿಸಿ ಇತರೆ ಸಂಗತಿಗಳಲ್ಲಿ ಆಸಕ್ತಿ ಇಲ್ಲ. ದೈಹಿಕ ತೊಂದರೆಗಾಗಿ ಪಡೆದ ಸಹಾಯವನ್ನು ಸಂಕುಚಿತ ಮನಸ್ಸಿನಿಂದ ನೋಡಬಾರದು ಎಂದು ತಿಳಿಸಿರುವ ಅವರು, ಅಗತ್ಯ ಸಹಾಯಕ್ಕಾಗಿ ತಮ್ಮ ಅಂಗರಕ್ಷಕನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.