ಶಿರಸಿ:
ಪದವಿ ಪೂರ್ವ ಶಿಕ್ಷಣಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಮೇಲುಸ್ತುವಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದೊಂದು ತಪ್ಪು ನಿರ್ಣಯವಾಗಿದ್ದು, ಸರ್ಕಾರ ಏನು ಮಾಡ ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಈ ತಪ್ಪಿನ ಬಗ್ಗೆ ತಿಳಿಸಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ. ಪ್ರತ್ಯೇಕ ಇಲಾಖೆ ಇದ್ದರೆ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಈ ಹಂತದಲ್ಲಿಯೇ ಅವರ ಭವಿಷ್ಯ ನಿರ್ಣಯವಾಗುವ ಕಾರಣ ಶಿಕ್ಷಣ ಇಲಾಖೆಯಿಂದ ಬೇರ್ಪಟ್ಟು ಪ್ರತ್ಯೇಕ ಇಲಾಖೆ ಆಗಬೇಕು ಎಂದು ಹಲವು ವರ್ಷಗಳ ಹೋರಾಟ ನಡೆದಿತ್ತು. 1991ರಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಪದವಿ ಪೂರ್ವ ಪ್ರತ್ಯೇಕ ಇಲಾಖೆ ಮಹತ್ವ ಅರಿತು ಶಿಕ್ಷಣ ಇಲಾಖೆಯಿಂದ ಬೇರ್ಪಡಿಸಿದ್ದರು. ಈಗ ಅವರ ಮಗ ಮಧು ಬಂಗಾರಪ್ಪ ಪದವಿಪೂರ್ವ ಶಿಕ್ಷಣವನ್ನು ಯಾರನ್ನೂ ಕೇಳದೇ, ಚರ್ಚೆ ಮಾಡದೇ ಈ ನಿರ್ಧಾರ ಕೈಗೊಂಡು ಮತ್ತೆ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರಲು ಹೊರಟಿದ್ದಾರೆ. ಈ ಸುತ್ತೋಲೆಯ ಹಿಂದೆ ಇರುವ ಅಜೆಂಡಾ ಏನು? ಸರ್ಕಾರ ಈ ಸುತ್ತೋಲೆ ವಾಪಸ್ ಪಡೆದು ಪದವಿ ಪೂರ್ವ ಶಿಕ್ಷಣ ಸ್ವತಂತ್ರವಾಗಿರಲು ಬಿಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಪಕ್ಷ ಶಿಕ್ಷಕರ ಕುರಿತಂತೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಯೇ ಬೇರೆ, ಈಗ ಆಗುತ್ತಿರುವುದೇ ಬೇರೆ. ಶಿಕ್ಷಕರಿಗೆ ಪೆನ್ಶನ್ ನೀಡುವ ವೇಳೆ ಎನ್‌ಪಿಎಸ್ ನಿಯಮದ ಬದಲಾಗಿ ಒಪಿಎಸ್ ಪದ್ಧತಿ ಬಳಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಒಪಿಎಸ್ ನಿಯಮದಂತೆ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರಿಗೂ ಪಿಂಚಣಿ ನೀಡಬೇಕು. ಆದರೆ, ಅಧಿಕಾರಕ್ಕೆ ಬಂದ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಪೆನ್ಶನ್ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಸರ್ಕಾರ ನಡೆದಿಲ್ಲ ಎಂದು ಕಿಡಿಕಾರಿದರು.ಪಿಯುಸಿಗೆ ವಾರ್ಷಿಕ ಪರೀಕ್ಷೆ ಬಳಿಕ ಒಂದು ಸಪ್ಲಿಮೆಂಟರಿ ಪರೀಕ್ಷೆ ಮಾತ್ರ ನಡೆಸಬೇಕಿತ್ತು. ಈಗ ಎರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಇದು ವರ್ಷದ ಮೊದಲಾರ್ಧ ಶಿಕ್ಷಣವನ್ನು ಗೊಂದಲದಲ್ಲಿ ಕಳೆಯುವಂತೆ ಮಾಡುತ್ತದೆ. ಎರಡನೇ ಸಪ್ಲಿಮೆಂಟರಿ ಪರೀಕ್ಷೆ ಪೂರ್ಣಗೊಳ್ಳುವಷ್ಟರಲ್ಲಿ ಸೆಪ್ಟೆಂಬರ್ ವರೆಗೂ ಸಮಯ ತೆಗೆದುಕೊಳ್ಳುವ ಕಾರಣ ಮಕ್ಕಳ ಪಠ್ಯಕ್ರಮ ಮುಗಿಸಲು ಸಾಧ್ಯವಿಲ್ಲ. ಇದರಿಂದ ಪರೀಕ್ಷೆಯ ಗಂಭೀರತೆ, ಗುಣಮಟ್ಟ ಇರುವುದಿಲ್ಲ.
ಈ ಪರೀಕ್ಷೆಯ ಪ್ರಯೋಜನ ಶೇ. 5ರಷ್ಟು ವಿದ್ಯಾರ್ಥಿಗಳಿಗೆ ಮಾತ್ರವಾಗಲಿದೆ. ಇನ್ನುಳ್ಳಿದ ಶೇ. 95ರಷ್ಟು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಎರಡನೇ ಸಪ್ಲಿಮೆಂಟರಿ ವಿದ್ಯಾರ್ಥಿಗಳಿಗೆ ಹಾನಿ ಆಗುತ್ತದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಆರ್.ವಿ. ಹೆಗಡೆ, ಶ್ರೀರಾಮ ನಾಯ್ಕ, ಎಂ.ಎನ್. ಹೆಗಡೆ, ಡಿ.ಆರ್. ನಾಯ್ಕ, ಗಣಪತಿ ನಾಯ್ಕ ಇತರರಿದ್ದರು.
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲ ಎಂಬುದು ಹಿನ್ನಡೆ ಎನಿಸುವುದಿಲ್ಲ. ಈಗಾಗಲೇ ಅಧಿವೇಶನವನ್ನು ಸಮರ್ಥವಾಗಿ ಎದುರಿಸಿದ್ದೇವೆ. ರಾಜ್ಯ ಸರ್ಕಾರದ ತಪ್ಪುಗಳಿಗೆ ಸಮರ್ಥವಾಗಿ ಚಾಟಿ ಬೀಸಿದ್ದೇವೆ ಎಂದು ಎಸ್.ವಿ. ಸಂಕನೂರು ಹೇಳಿದರು.