ರಾಜ್ಯದ್ದಲ್ಲ, ಕೇಂದ್ರದ ಖಜಾನೆ ಖಾಲಿಯಾಗಿದೆ: ಸಚಿವ ಎಚ್‌. ಕೆ.ಪಾಟೀಲ್‌

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಆರ್ಥಿಕ ಪರಿಸ್ಥಿತಿ ಬಗ್ಗೆ ಬಿಎಸ್‌ವೈ ಹೇಳಿಕೆ ವಿರುದ್ಧ ಸಚಿವ ಎಚ್ಕೆಪಿ ವಾಗ್ದಾಳಿ ಬರದಿಂದ ತತ್ತರಿಸಿದ ರಾಜ್ಯಕ್ಕೆ ನೆರವು ನೀಡದ ಕೇಂದ್ರ ಸರ್ಕಾರ: ಆರೋಪ ಮುಖ್ಯಮಂತ್ರಿ, ಸಚಿವರಿಗೆ ಭೇಟಿಗೆ ಅವಕಾಶ ನೀಡದ ಪ್ರಧಾನಿ ಕುರಿತು ಆಕ್ಷೇಪ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಶಿರವಾಳದಲ್ಲಿ ಸಚಿವ ಎಚ್ಕೆಪಿ ಹೇಳಿಕೆ

ಕನ್ನಡಪ್ರಭ ವಾರ್ತೆ ಶಹಾಪುರ

ಬರದಿಂದ ರಾಜ್ಯ ತತ್ತರಿಸಿದೆ, 37 ಸಾವಿರ ಕೋಟಿ ರು. ಕೃಷಿ ಹಾನಿಯಾಗಿದೆ. ತಕ್ಷಣವೇ 3 ಸಾವಿರ ಕೋಟಿ ರು. ನೆರವು ನೀಡುವಂತೆ ಕೇಂದ್ರಕ್ಕೆ ನಾವು (ರಾಜ್ಯ ಸರ್ಕಾರ) ಕೋರಿದ್ದರೂ ಕೇಂದ್ರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾದ ಎಚ್.ಕೆ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಐತಿಹಾಸಿ ಪ್ರದೇಶದ ವೀಕ್ಷಣೆಗೆಂದು ಬುಧವಾರ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಶಿರವಾಳಕ್ಕೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಸಿಎಂ ಬಿಎಸ್‌ವೈ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬರದಿಂದ ತತ್ತರಿಸಿದ ನಮ್ಮ ರಾಜ್ಯಕ್ಕೆ ತಕ್ಷಣಕ್ಕೆ 3 ಸಾವಿರ ಕೋಟಿ ರು. ತಕ್ಷಣ ನೀಡುವಂತೆ ಕೇಂದ್ರಕ್ಕೆ ಕೋರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲೇ ಬೀಡು ಬಿಟ್ಟು ನಾಲ್ಕು ಬಾರಿ ಪ್ರಧಾನಿ ಭೇಟಿಗೆ ಅವಕಾಶ ಕೋರಿದರೂ ಸಿಗುತ್ತಿಲ್ಲ, ಸಚಿವ ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ತಂಡವು ಪ್ರಧಾನಿ ಮೋದಿ ಸೇರಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕೃಷಿ ಮಂತ್ರಿ ಭೇಟಿಗೆ ಪ್ರಯತ್ನಿಸಿದರೂ ಭೇಟಿ ಆಗಲಿಲ್ಲ ಎಂದು ಸಚಿವ ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನೈಯಾಪೈಸೆ ಬಿಡುಗಡೆ ಆಗಿಲ್ಲ: ಮುಂಗಾರು ಸಂಪೂರ್ಣ ಹಾಳಾಗಿದ್ದರೂ ನೈಯಾಪೈಸೆ ಪರಿಹಾರ ಕೇಂದ್ರದಿಂದ ಬಿಡುಗಡೆ ಮಾಡಿಲ್ಲ. ಆರ್ಥಿಕ ಅಡಚಣೆ ನಡುವೆಯೂ ನಮ್ಮ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಶೇ.92-93 ರಷ್ಟು ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣ ನೀಡಿದೆ ಎಂದ ಸಚಿವ ಎಚ್‌.ಕೆ. ಪಾಟೀಲ್‌, ನಮ್ಮ ರಾಜ್ಯದ್ದಲ್ಲ, ನಿಮ್ಮ (ಬಿಜೆಪಿ) ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಯಡಿಯೂರಪ್ಪನವರೇ ಈ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ ಎಂದು ತಾಕೀತು ಮಾಡಿದರು.

ಆರ್ಥಿಕ ಅಡಚಣೆ ಆಗಿದ್ದರೂ ಸೂಕ್ತ ವ್ಯವಸ್ಥೆ ಮಾಡಿಕೊಂಡು, ಜನರಿಗೆ ಕೊಟ್ಟ ಭರವಸೆಯನ್ನು ನಮ್ಮ ರಾಜ್ಯ ಸರ್ಕಾರ ಪೂರ್ಣಗೊಳಿಸುತ್ತದೆ, ಕೇಂದ್ರದಂತೆ ಮಲತಾಯಿ ಧೋರಣೆ ಮಾಡುವುದಿಲ್ಲ ಎಂದರು.

ಎಂಪಿಗಳಿಗೆ ನಾಚಿಕೆಯಾಗಬೇಕು: ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ. ಬರ ಇಲ್ಲವೆಂದು ವರದಿ ಕೊಡುತ್ತೀರೇನು? ಎಂದು ಕೇಂದ್ರಕ್ಕೆ ಟೀಕಿಸಿದ ಪಾಟೀಲ್‌, ದೆಹಲಿಗೆ ಹೋಗಿ ರಾಜ್ಯಕ್ಕೆ ಬರ ಪರಿಹಾರ ನೀಡುವಂತೆ ಹೇಳಲು ಸಂಸದರಿಗೆ ಆಗುವುದಿಲ್ಲವೇ, ನಾಚಿಕೆಯಾಗಬೇಕು ಎಂದರು.

ರಾಜ್ಯ ಬಿಜೆಪಿ ಈಗ ಬರ ಅಧ್ಯಯನ ನಡೆಸುತ್ತದೆ ಎನ್ನುತ್ತಿರುವುದು ಹಾಸ್ಯಾಸ್ಪದ. ಬರ ಅಧ್ಯಯನ ಹೆಸರಲ್ಲಿ ಅನುದಾನ ಬಿಡುಗಡೆ ವಿಳಂಬ ಪ್ರಯತ್ನದ ಭಾಗವಿದು ಎಂದು ಷಚಿವ ಎಚ್‌.ಕೆ. ಪಾಟೀಲ್‌ ತರಾಟೆಗೆ ತೆಗೆದುಕೊಂಡರು.

Share this article