ವಿದ್ಯಾರ್ಥಿಗಳ ವಸತಿ ಸಮಸ್ಯೆ ಪರಿಹರಿಸಲು ಕ್ರಮ

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಸತಿ ಸಮಸ್ಯೆಯಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಭರವಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಸತಿ ಸಮಸ್ಯೆಯಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಭರವಸೆ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ಸಪ್ತಾಪುರ ಬಡಾವಣೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಧಿಡೀರ್‌ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ವಸತಿ ನಿಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 450 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಆದರೆ, 600ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇದರಿಂದಾಗಿ ಸಮಸ್ಯೆ ಉದ್ಭವವಾಗಿದೆ. ಒಂದು ಕೊಠಡಿಯಲ್ಲಿ 8-10 ವಿದ್ಯಾರ್ಥಿಗಳಿದ್ದಾರೆ. ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಇದೇ ವಸತಿ ನಿಲಯದ ಒಳಗೆ ಹೆಚ್ಚುವರಿ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆಗ ವಿದ್ಯಾರ್ಥಿಗಳ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದರು.

ಕೆಲವು ವಿದ್ಯಾರ್ಥಿಗಳು ಹಾಸ್ಟೇಲ್‌ನ ಗ್ರಂಥಾಲಯದಲ್ಲಿ ಮಲಗುತ್ತಿರುವ ಆರೋಪಕ್ಕೆ ಉತ್ತರಿಸಿದ ಸಚಿವರು, ಕೆಲವರು ಗ್ರಂಥಾಲಯದಲ್ಲಿ ಹೆಚ್ಚಾಗಿ ಓದುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಇರಬಹುದು. ಅಲ್ಲದೇ ಇಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಈ ಸಮಸ್ಯೆ ಉದ್ಭವವಾಗಿರಬಹುದು. ಎಲ್ಲ ಸಮಸ್ಯೆಗಳಿಗೂ ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ದೊರೆಯಲಿದೆ ಭರವಸೆ ನೀಡಿದರು.

ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು ನಿಲಯದ ಅಡುಗೆ ಕೋಣೆಗೆ ಹೋಗಿ ಮಕ್ಕಳಿಗೆ ತಯಾರಿಸುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಅಡುಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಶುಚಿಯಾದ, ರುಚಿಯಾದ ಆಹಾರ ನೀಡಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಚಿವರು ಸೂಚನೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಚರ್ಚೆ:

ವಸತಿ ನಿಲಯದ ಅಡುಗೆ ಕೋಣೆ ಪರಿಶೀಲಿಸಿ ಹೊರಗೆ ಬಂದ ಸಚಿವರು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ವಸತಿ ಸಮಸ್ಯೆಯ ಕುರಿತು ಸಚಿವರ ಗಮನಕ್ಕೆ ತಂದರು. ವೇಳೆಗೆ ಸರಿಯಾಗಿ ಊಟ ನೀಡುತ್ತಾರೆಯೇ ಎಂದು ಸಚಿವರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು, ಇಲ್ಲಿ ವಸತಿ ಸಮಸ್ಯೆಯೊಂದನ್ನು ಬಿಟ್ಟು ಬೇರೆ ಯಾವ ಸಮಸ್ಯೆಯೂ ಇಲ್ಲ. ಆದಷ್ಟು ಬೇಗ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಮಗೆ ಅನಕೂಲ ಮಾಡಿಕೊಡುವಂತೆ ಸಚಿವರ ಮುಂದೆ ಮನವಿ ಮಾಡಿದರು. ಆಗ, ಸಚಿವರು ಆದಷ್ಟು ಬೇಗನೆ ವಸತಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮಾಹಿತಿ ಇಲ್ಲ:

ಕಿಯೋನಿಕ್ಸ್ ಎಂಡಿಗೆ ಕಡ್ಡಾಯ ರಜೆ ಶಿಕ್ಷೆ ವಿಚಾರ ಆರೋಪ ಕುರಿತು ಉತ್ತರಿಸಿದ ಸಚಿವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಗುತ್ತಿಗೆದಾರರು ದೂರು ಕೊಟ್ಟಿದ್ದಾರಂತೆ. ದೂರು ಕೊಟ್ಟಿರುವ ಹಿನ್ನೆಲೆ ವಿಚಾರಣೆ ನಡೆಯುತ್ತದೆ. ಕಮೀಷನ್ ಕೇಳಿರುವ ಆರೋಪಗಳಿದ್ದರೆ ತನಿಖೆಯಾಗಬೇಕು. ಅವರು ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮವಾಗಲಿದೆ ಎಂದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಹು-ಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಎಂ.ಬಿ. ಸನ್ನೇರ, ಜಂಟಿ ನಿರ್ದೇಶಕ ಅಲ್ಲಾ ಬಕಾಷ್‌, ವಾರ್ಡನ್‌ ಆಸ್ಕರ್, ಕವಿವಿ ಅಂಬೇಡ್ಕರ್‌ ಅಧ್ಯಯನ ಪೀಠದ ಡಾ. ಸುಭಾಷ ನಾಟಿಕಾರ ಸೇರಿದಂತೆ ಹಲವರಿದ್ದರು.

Share this article