ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಂಗನ ಮೃತದೇಹ ಪತ್ತೆ: ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : May 01, 2024, 01:18 AM IST
ಹಲಗೇರಿ ಗ್ರಾಪಂನಲ್ಲಿ ಸಾರ್ವಜನಿಕರ, ಅಧಿಕಾರಿಗಳ ಸಭೆ ನಡೆಯಿತು. | Kannada Prabha

ಸಾರಾಂಶ

ಮಂಗನ ಮೃತದೇಹ ಪತ್ತೆಯಾದ ಹಿನ್ನೆಲೆ ಸ್ಥಳೀಯ ಸಾರ್ವಜನಿಕರು ಗ್ರಾಪಂ ಕಚೇರಿಗೆ ಬಂದು ಸಮಸ್ಯೆ ಬಗ್ಗೆ ವಿವರಿಸಿ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿದರು.

ಸಿದ್ದಾಪುರ: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಂಗನ ಮೃತದೇಹ ಪತ್ತೆಯಾದ ಘಟನೆ ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯ ಮೆಣಸಿಯಲ್ಲಿ ನಡೆದಿದೆ.

ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಕಂಡುಬರುತ್ತಿರುವುದರ ಸಂದರ್ಭದಲ್ಲಿ ಜರುಗಿದ ಈ ಘಟನೆ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಮಂಗನ ಮೃತದೇಹ ಪತ್ತೆಯಾದ ಹಿನ್ನೆಲೆ ಸ್ಥಳೀಯ ಸಾರ್ವಜನಿಕರು ಗ್ರಾಪಂ ಕಚೇರಿಗೆ ಬಂದು ಸಮಸ್ಯೆ ಬಗ್ಗೆ ವಿವರಿಸಿ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆರೋಪಿಸಿದರು.

ಪಂಚಾಯಿತಿಗೆ ಸಮುದಾಯ ಆರೋಗ್ಯ ಅಧಿಕಾರಿ ರವಿ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಶ ರಾಠೋಡ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಮಂಗ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಮುಚ್ಚಳ ಇರದ ಎಲ್ಲ ವಾಟರ್ ಟ್ಯಾಂಕ್‌ಗಳಿಗೆ ಮುಚ್ಚಿಗೆ ಮಾಡಿಸಲು ಸಿಬ್ಬಂದಿಗೆ ಸೂಚಿಸಿದರು.

ಆ ನೀರಿನ ಟ್ಯಾಂಕ್ ನ ನೀರು ಬಳಸಿದ ಜನರಿಗೆ ಯಾವುದಾದರೂ ರೋಗ ಲಕ್ಷಣ ಕಂಡುಬಂದರೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು.ಹಿಂದೆಯೂಹ ಇದೇ ಟ್ಯಾಂಕ್‌ನಲ್ಲಿ ಮಂಗ ಮೃತಪಟ್ಟಿದ್ದು, ಹೀಗಿದ್ದರೂ ಮುಚ್ಚಿಗೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಾಗಲೇ ಸಾಕಷ್ಟು ಜನರು ಈ ನೀರನ್ನು ಬಳಸಿದ್ದು, ಮುಂದೆ ಇದರಿಂದ ಅವಘಡಗಳಾದರೆ ಅದಕ್ಕೆ ಸ್ಥಳೀಯ ಪಂಚಾಯಿತಿಯವರೇ ಹೊಣೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಮಂಗ ನೀರಲ್ಲಿ ಬಿದ್ದರೆ ಕೊಳೆಯಲು ಐದಾರು ದಿನ ಬೇಕು. ಈ ನೀರು ಬಳಸಿರುವುದರಿಂದ ಮಂಗನ ಕಾಯಿಲೆ ಬರುವುದಿಲ್ಲ. ಸಣ್ಣಪುಟ್ಟ ಜ್ವರ, ವಾಂತಿ ಭೇದಿ, ತುರಿಕೆ ಲಕ್ಷಣ ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.ಕುಡಿಯುವ ನೀರು ಪೂರೈಕೆ ಮಾಡುವ ಇಲಾಖೆ ಹಾಗೂ ಗ್ರಾಪಂನವರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಅತಿ ಸೂಕ್ಷ್ಮ ಸಂಗತಿಯಾದ ಕುಡಿಯುವ ನೀರಿನ ಪೂರೈಕೆಯಲ್ಲಿನ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೂ ಸಂಚಕಾರ ಬರಬಹುದು. ಕೇವಲ ನೀರು ಪೂರೈಕೆ ಮಾಡುವುದಲ್ಲ, ನೀರಿನ ಟ್ಯಾಂಕ್‌ಗಳ ಸುರಕ್ಷತೆಯ ಬಗ್ಗೆಯೂ ಇಲಾಖೆಗಳು, ಗ್ರಾಪಂಗಳು ಹೆಚ್ಚಿನ ಗಮನ ವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬರುತ್ತಿದೆ.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್