ಮೃತ ಮಗನ ನೆನಪಿಗಾಗಿ ಗೋಶಾಲೆ ತೆರೆದ ತಾಯಿ

KannadaprabhaNewsNetwork |  
Published : Nov 22, 2023, 01:00 AM IST
೨೧ಎಚ್‌ವಿಆರ್೪ | Kannada Prabha

ಸಾರಾಂಶ

ಅಪಘಾತದಲ್ಲಿ ಮೃತಪಟ್ಟ ಮಗನ ನೆನಪಿಗಾಗಿ ತಾಯಿ ಗೋಶಾಲೆಯನ್ನು ತೆರೆಯುವ ಮೂಲಕ ಮಾನವೀಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಪುತ್ರ ಸಂದೇಶ ಮೂರ್ನಾಲ್ಕು ತಿಂಗಳ ಹಿಂದೆ ಬೆಳಗಾವಿಯ ಕಿತ್ತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ಸಂಗೀತಾ ಮಮ್ಮಲ ಮರುಗಿದರು. ಆ ನೋವು ಮರೆಯಲು ಈಗ ಅವರು ತಾಲೂಕಿನ ಗಾಂಧಿಪುರ ಬಳಿ ಮಗನ ನೆನಪಿಗಾಗಿ ಗೋಶಾಲೆ ತೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ಅಪಘಾತದಲ್ಲಿ ಮೃತಪಟ್ಟ ಮಗನ ನೆನಪಿಗಾಗಿ ತಾಯಿ ಗೋಶಾಲೆಯನ್ನು ತೆರೆಯುವ ಮೂಲಕ ಮಾನವೀಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಪುತ್ರ ಸಂದೇಶ ಮೂರ್ನಾಲ್ಕು ತಿಂಗಳ ಹಿಂದೆ ಬೆಳಗಾವಿಯ ಕಿತ್ತೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ಸಂಗೀತಾ ಮಮ್ಮಲ ಮರುಗಿದರು. ಆ ನೋವು ಮರೆಯಲು ಈಗ ಅವರು ತಾಲೂಕಿನ ಗಾಂಧಿಪುರ ಬಳಿ ಮಗನ ನೆನಪಿಗಾಗಿ ಗೋಶಾಲೆ ತೆರೆದಿದ್ದಾರೆ.

ನಗರದ ನಿವಾಸಿ ಸಂಗೀತಾ ಶೇಠ್ ಮತ್ತು ಅನಿಲ್ ಕೂಸನೂರು ದಂಪತಿಯನ್ನು ಮಗನ ಅಕಾಲಿಕ ಸಾವು ದುಃಖದ ಮಡುವಿಗೆ ನೂಕಿತ್ತು. ಪುತ್ರನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿ ಮಗನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು ಎಂದು ಗೋಶಾಲೆ ತೆರೆಯುವ ಸಂಕಲ್ಪ ತೊಟ್ಟರು. ₹೨೭ ಲಕ್ಷ ವೆಚ್ಚದಲ್ಲಿ ಜಮೀನು ಖರೀದಿಸಿ, ಶೆಡ್ ನಿರ್ಮಾಣ ಮಾಡಿ, ಅನಾಥ ಮತ್ತು ವಯಸ್ಸಾದ ದನ ಕರುಗಳಿಗೆ ಆಶ್ರಯ ನೀಡಿ, ಇತರರಿಗೆ ಮಾದರಿಯಾಗಿದ್ದಾರೆ. ಗೋವುಗಳಿಗೆ ಮೇವು, ನೀರು, ನೆರಳು ಒದಗಿಸುವ ಮೂಲಕ ಮಾನವೀಯ ಕೆಲಸಕ್ಕೆ ಮುಂದಾಗಿದ್ದಾರೆ.

ಮಗನ ಜನ್ಮದಿನದಂದು ಸೋಮವಾರ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಗೋಶಾಲೆಗೆ ಚಾಲನೆ ನೀಡಿ ಮಾತನಾಡಿ, ೩೩ ಕೋಟಿ ದೇವತೆಗಳಿರುವ ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ಥಾನವಿದೆ. ಈ ದಂಪತಿಯ ಸಾಮಾಜಿಕ ಸೇವೆ ಅನುಕರಣೀಯವಾಗಿದೆ. ಅನಾಥ ಗೋವುಗಳಿಗೆ ಇದು ಆಶ್ರಯ ತಾಣವಾಗಲಿ. ಗೋರಕ್ಷಣೆಗೆ ಸಂಕಲ್ಪ ತೊಟ್ಟಿರುವ ಇವರಿಗೆ ಶುಭವಾಗಲಿ ಎಂದು ಕೋರಿದರು.

ಒಂದು ಎಕರೆ ಜಮೀನಿನಲ್ಲಿ ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವು, ನೀರು ಸೌಲಭ್ಯ ಕಲ್ಪಿಸಲಾಗಿದೆ. ಪ್ರಸ್ತುತ ಬರದಿಂದ ರೈತರು ಕಂಗೆಟ್ಟಿದ್ದಾರೆ. ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸಲುವುದು ರೈತರಿಗೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಗೋಶಾಲೆಗೆ ತಮ್ಮ ಜಾನುವಾರುಗಳನ್ನು ತಂದು ಬಿಡಬಹುದು. ನಂತರ ತಮ್ಮ ಪರಿಸ್ಥಿತಿ ಸುಧಾರಿಸಿದ ಮೇಲೆ ಜಾನುವಾರುಗಳನ್ನು ಮರಳಿ ತಮ್ಮ ಮನೆಗೆ ಕರೆದೊಯ್ಯಬಹುದಾಗಿದೆ.

ಈಗಾಗಲೇ ೧೦ಕ್ಕೂ ಅಧಿಕ ಜಾನುವಾರುಗಳು ಈ ಗೋಶಾಲೆಯಲ್ಲಿ ಆಶ್ರಯ ಪಡೆದಿವೆ.

ಮಗನನ್ನು ಕಳೆದುಕೊಂಡು ಬಹಳ ನೋವಾಗಿದೆ. ಗೋಶಾಲೆ ನಿರ್ಮಿಸಿ, ಆಕಳು, ಕರುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು ಎಂದು ಅನಿಸಿತು. ಈ ಗೋವುಗಳಲ್ಲೇ ಮಗನನ್ನು ಕಾಣುತ್ತಿದ್ದೇನೆ ಎನ್ನುತ್ತಾರೆ ಸಂಗೀತಾ ಶೇಠ್.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ