ಸಾರ್ವಜನಿಕ ಕೆಲಸವನ್ನು ಮಾಡುವವರಿಗೆ ತಾಯಿ ಹೃದಯ ಅವಶ್ಯವಾಗಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ, ಹಣ ಹಾಗೂ ನಮ್ಮ ಆಯುಸ್ಸು ಶಾಶ್ವತವಾದದ್ದಲ್ಲ, ನಾವು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸವು ಶಾಶ್ವತ ಎಂದು ಶಾಸಕ ಯಾಸೀರಅಹ್ಮದಖಾನ ಪಠಾಣ ಹೇಳಿದರು.
ಶಿಗ್ಗಾಂವಿ: ಸಾರ್ವಜನಿಕ ಕೆಲಸವನ್ನು ಮಾಡುವವರಿಗೆ ತಾಯಿ ಹೃದಯ ಅವಶ್ಯವಾಗಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ, ಹಣ ಹಾಗೂ ನಮ್ಮ ಆಯುಸ್ಸು ಶಾಶ್ವತವಾದದ್ದಲ್ಲ, ನಾವು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸವು ಶಾಶ್ವತ ಎಂದು ಶಾಸಕ ಯಾಸೀರಅಹ್ಮದಖಾನ ಪಠಾಣ ಹೇಳಿದರು.
ಅವರು ತಾಲೂಕಿನ ಭದ್ರಾಪುರದಲ್ಲಿ ಮನೆಗಳ ಪಟ್ಟಾ ವಿತರಣೆ ಮಾಡಿ ಮಾತನಾಡಿದರು. ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಈಗಿನ ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ತಾಯಿಯ ಹೃದಯವಿದೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಐದು ಗ್ಯಾರಂಟಿ ನೀಡುವ ಭರವಸೆ ನೀಡಿದ್ದರು. ವಿರೋಧಿಗಳ ಮಾತು ಕೇಳದೆ ನಮ್ಮ ಕಾಂಗ್ರೆಸ್‌ಗೆ ಮತವನ್ನು ನೀಡಿ ಐದು ಗ್ಯಾರಂಟಿ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ಎಂದರು.
ಭದ್ರಾಪುರದಲ್ಲಿ ಇಂತಹ ಜನಪರ ಕಾಳಜಿಯ ಹೃದಯ ಬಿಜೆಪಿಗರಿಗೆ ಇಲ್ಲವೇ ಇಲ್ಲ. ವಸತಿ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಿಕೊಡುವಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ. ಭದ್ರಾಪುರಕ್ಕೆ ೧೦೦ ಮನೆಗಳನ್ನು ಮಂಜೂರು ಮಾಡಲಾಗುವುದು. ಈ ಪ್ರತಿಯೊಂದು ಮನೆಗೆ ರಾಜ್ಯ ಸರ್ಕಾರದಿಂದ ತಲಾ ೨ ಲಕ್ಷ ರು. ಅನುದಾನವನ್ನು ನೀಡುತ್ತಿದ್ದೇವೆ. ಇದೇ ರೀತಿ ಕೇಂದ್ರ ಸರ್ಕಾರವೂ ಸಹ ತನ್ನ ಪಾಲಿನ ೨ ಲಕ್ಷ ರುಪಾಯಿಗಳನ್ನು ನೀಡಲಿ ಎಂದರು.
ಭದ್ರಾಪುರದಲ್ಲಿ ಸ್ವಂತ ಹೆಸರಿನಲ್ಲಿ ಹಕ್ಕುಪತ್ರಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ನೂರಾರು ಫಲಾನುಭವಿಗಳಿಗೆ ಇಂದು ಕಾನೂನುಬದ್ದ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಗ್ರಾಮದ ಹಿರಿಯರ ಸುದೀರ್ಘ ಕಾಳಜಿ ಹಾಗೂ ಹೋರಾಟದ ಫಲವಾಗಿ, ದೇಸಾಯಿ ಅವರ ಜಮೀನನ್ನು ತಹಸೀಲ್ದಾರ್ ಹೆಸರಿಗೆ ವರ್ಗಾಯಿಸಿ, ತದನಂತರ ಕಾನೂನು ಪ್ರಕಾರ ಸಾರ್ವಜನಿಕರನ್ನು ಸಂಪೂರ್ಣ ಮಾಲೀಕರನ್ನಾಗಿ ಮಾಡಲಾಗಿದೆ.
ರಾಜ್ಯದ ಬಡವರಿಗೆ ಗೃಹ ನಿರ್ಮಾಣದ ಅನುದಾನವನ್ನು ಇನ್ನಷ್ಟು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ನಾನು ಶಾಸಕನಾಗಿ ಆಯ್ಕೆಯಾದ ಕೇವಲ ೧೮ ತಿಂಗಳ ಒಳಗಾಗಿ ಸಾವಿರಾರು ಕೋಟಿ ರುಪಾಯಿಗಳ ಅಭಿವೃದ್ಧಿ ಅನುದಾನವನ್ನು ತಂದಿದ್ದೇನೆ. ಒಬ್ಬ ಸಾಮಾನ್ಯ ವ್ಯಕ್ತಿ ಶಿಗ್ಗಾಂವಿ ಕ್ಷೇತ್ರದಲ್ಲಿ ಗೆದ್ದಿದ್ದಾನೆ ಎಂಬ ಕಾರಣಕ್ಕೆ ನಮ್ಮ ಸರ್ಕಾರ ಈ ಕ್ಷೇತ್ರದ ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ನೀಡುತ್ತಿದೆ. ಈಗಾಗಲೇ ತಾಲೂಕಿನ ೪೦೦ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿಶೇಷ ಅನುದಾನ ಒದಗಿಸಲಾಗಿದೆ. ಭದ್ರಾಪುರದಲ್ಲಿ ದೊಡ್ಡ ಸಮಸ್ಯೆಯಾಗಿದ್ದ ೫ ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸೌಕರ್ಯ ಹೆಚ್ಚಿಸಲು ಈಗಾಗಲೇ ೮ ಹೊಸ ಬಸ್ ನೀಡಲಾಗಿದ್ದು, ಮುಂದಿನ ದಿನ ಇನ್ನು ೧೫ ಹೊಸ ಬಸ್ಸುಗಳು ತರಲಾಗುವುದು ಎಂದರು.
ಮುಂದಿನ ಚುನಾವಣೆಗೆ ಮುಂಚಿತವಾಗಿ ಪೂರ್ಣ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಜನರ ಬಳಿ ಮತ ಕೇಳಲು ಬರುವುದಾಗಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.