ಕನ್ನಡಪ್ರಭ ವಾರ್ತೆ ಕೋಲಾರ
ಕೋಲಾರ ಜಿಲ್ಲೆ ಸೇರಿ ಇಡೀ ರಾಜ್ಯದಲ್ಲಿ ಇ-ಖಾತಾ ಹಾಗೂ ಮೂಟೇಷನ್ ಕುರಿತು ಸಮಸ್ಯೆಯಿದ್ದು, ಇನ್ನೂ ಮೂರು ತಿಂಗಳೊಳಗಾಗಿ ಎ ಹಾಗೂ ಬಿ-ಖಾತಾ ನೀಡಲು ಕ್ರಮಕೈಗೊಳ್ಳಲಾಗುವುದೆಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕೋಲಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಅಂಗಡಿ-ಮುಂಗಟ್ಟು ಹಾಗೂ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ರಸ್ತೆ, ವಿದ್ಯುತ್, ನೀರು, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳು ಬೇಕಾಗಿವೆ. ಆದರೆ ಇವರು ಯಾವುದೇ ರೀತಿಯ ಆಸ್ತಿ ತೆರಿಗೆ ಕಟ್ಟುತ್ತಿಲ್ಲ, ಕಾರಣ ಮ್ಯೂಟೇಷನ್ ಹಾಗೂ ಇ-ಖಾತಾ ಕುರಿತು ನಗರಸಭೆಗಳಲ್ಲಿ ದಾಖಲೆಗಳಿಲ್ಲ, ಬೆಂಗಳೂರಿನಲ್ಲಿದಂತೆ ಎ ಮತ್ತು ಬಿ ಖಾತಾ ರೀತಿಯಲ್ಲಿ ಕೋಲಾರ ಸೇರಿದಂತೆ ರಾಜ್ಯದಲ್ಲಿ ಎಲ್ಲರಿಗೂ ಅನ್ವಯುಸುವಂತೆ ಮಾಡಲು ಕ್ಯಾಬಿನೆಟ್‌ನಲ್ಲಿಡಲಾಗಿದ್ದು, ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಎ-ಬಿ ಖಾತಾ ನೋಂದಣಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ತೃಪ್ತಿ ತಂದಿಲ್ಲ, ೧-೨ ತಿಂಗಳೊಳಗಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಗಾಗ್ಗೆ ಅಭಿವೃದ್ಧಿ ಕುರಿತು ಸಭೆ ನಡೆಸಲು ತೀರ್ಮಾನಿಸಲಾಯಿತು.ವ್ಯಾಪಾರ ಪರವಾನಗಿ(ಟ್ರೇಡ್ ಲೈಸನ್ಸ್):
ಈಗ ವ್ಯಾಪಾರ ಪರವಾನಗಿಯನ್ನು ಐದು ವರ್ಷಗಳಿಗೊಮ್ಮೆ ನೀಡಲು ನಿರ್ಧರಿಸಿದೆ, ಈ ಹಿಂದೆ ಒಂದೇ ವರ್ಷಕ್ಕೆ ವ್ಯಾಪರ ಪರವಾನಗಿ ನೀಡಲಾಗುತ್ತಿತ್ತು ಎಂದರು.ತೆರಿಗೆ ವಸೂಲಾತಿ:
ತೆರಿಗೆ ವಸೂಲಾತಿಯಲ್ಲಿ ತೀವ್ರ ಕ್ರಮಕೈಗೊಳ್ಳಲು ದ್ರೋಣ್ ಸರ್ವೇ ಸಹಾಯ ಪಡೆದು ಇಂಡೀಕರಣ (ಅಪ್‌ಡೆಟ್) ಮಾಡಲಾಗುವುದು. ಒಂದೇ ಕಟ್ಟಡಕ್ಕೆ ಅನುಮತಿ ಪಡೆದು ೩-೪ಕ್ಕೂ ಅಂತಸ್ತುಗಳನ್ನು ಕಟ್ಟುತ್ತಿರುವುದು ಕಂಡು ಬರುತ್ತಿದ್ದು, ತೆರಿಗೆ ಒಂದೇ ಕಟ್ಟಡಕ್ಕೆ ತುಂಬುತ್ತಿದ್ದಾರೆ. ಹೀಗಾಗಿ ತೆರಿಗೆಯ ಮಾಹಿತಿ ಒಂದೆಡೆ ಸಂಗ್ರಹಿಸಲು ದ್ರೋಣ್ ಸರ್ವೇ ಉಪಯುಕ್ತವಾಗಿದೆ. ಇದರಿಂದ ತೆರಿಗೆಯನ್ನು ಕಟ್ಟುನಿಟ್ಟಾಗಿ ಹಾಗೂ ವ್ಯವಸ್ಥೆಗನುಗುಣವಾಗಿ ತುಂಬಿಸಬಹುದಾಗಿದೆ ಎಂದರು.ನೀರಿನ ತೆರಿಗೆ:
ಯಥೇಚ್ಛವಾಗಿ ದಿನನಿತ್ಯ ಬಳಸುವ ನೀರಿಗೆ ಸರ್ಕಾರವು ಶೇ.೫-೧೦ ನೀರಿನ ಶುಲ್ಕ ವಿಧಿಸಿದ್ದರೂ ಸಾರ್ವಜನಿಕರು ಸರಿಯಾಗಿ ಕರವನ್ನು ತುಂಬುವುದಿಲ್ಲ ಹಾಗೂ ಸಂಬಂಧಪಟ್ಟವರು ಕರ ಸಂಗ್ರಹಿಸಲು ಹೋಗುತ್ತಿಲ್ಲ. ಆದ್ದರಿಂದ ಆಸ್ತಿ ಹಾಗೂ ನೀರಿನ ತೆರಿಗೆ ವಸೂಲಿ ಮಾಡಲು ಖಾಸಗಿ ಸಂಘ-ಸಂಸ್ಥೆಗಳಿಗೆ ವಹಿಸಲು ಕ್ಯಾಬಿನೇಟ್‌ಲ್ಲಿ ಮಂಡಿಸಲಾಗಿದೆ, ಈ ಸಂಘ-ಸಂಸ್ಥೆಗಳಿಗೆ ಮನೆ-ಮನೆಗೆ ಹೋಗಿ ನೀರು ಹಾಗೂ ಆಸ್ತಿಯ ತೆರಿಗೆ ವಸೂಲಿ ಮಾಡುವ ಕಾರ್ಯ ವಹಿಸಲಾಗುವುದು ಎಂದರು.ಪ್ರತಿ ಜಿಲ್ಲೆಗೂ ಚರಂಡಿ, ಉದ್ಯಾನವನ ಇನ್ನಿತರೆ ಮೂಲಭೂತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ೧೦ ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಕೋಲಾರ ಜಿಲ್ಲೆಯ ನಗರಸಭೆಗಳಲ್ಲಿ ೧೦೭ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದ್ದು, ನೇಮಕಾತಿಗೊಳಿಸಲು ಮನವಿ ಮಾಡಿದರು. ಕೆಜಿಎಫ್ ನಗರಸಭೆ ವ್ಯಾಪ್ತಿಯಲ್ಲಿ-೨೩ ಹಾಗೂ ಮಾಲೂರು ಪುರಸಭೆ-೨೯ ಹುದ್ದೆಗಳು ಖಾಲಿಯಿದ್ದು, ವಿಶೇಷ ನೇಮಕಾತಿ ಮೂಲಕ ನೇಮಕ ಮಾಡಲು ಪೌರಾಡಳಿತ ನಿರ್ದೇಶನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ನಗರಸಭೆ ಆಯುಕ್ತ ಶಿವಾನಂದ ಈ ಬಗ್ಗೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.ಶಾಸಕರಾದ ಡಾ. ಕೊತ್ತೂರು ಜಿ. ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಎಡಿಸಿ ಡಾ.ಶಂಕರ ವಣಿಕ್ಯಾಳ್ ಇದ್ದರು.