ಎಂ.ಕೆ.ಹರಿಚರಣ್ ತಿಲಕ್
ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿದ್ದರೂ ನೌಕರ ವರ್ಗದ ನಿರ್ಲಕ್ಷ್ಯದಿಂದ ಕನ್ನಡ ಆಡಳಿತ ಭಾಷೆಯಾಗಿ ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದರೆ, ತಾಲೂಕಿನ ಶೀಳನೆರೆ ಗ್ರಾಮದ ಪಶು ಸಂಗೋಪನಾ ಇಲಾಖೆ ಜಾನುವಾರು ಅಧಿಕಾರಿ ಅ.ನಿ.ದೇವರಾಜು ಅವರು ಕನ್ನಡದಲ್ಲಿಯೇ ಇಲಾಖೆ ವ್ಯವಹಾರ ನಡೆಸುತ್ತಾ ‘ಕನ್ನಡಪ್ರಜ್ಞೆ’ ಮೆರೆದು ಆಡಳಿತಕ್ಕೆ ಮಾದರಿಯಾಗಿದ್ದಾರೆ.
ಜಾನುವಾರ ಅಧಿಕಾರಿ ದೇವರಾಜು ಅವರು ತಮ್ಮ ಅಡಿಯಿಂದ ಮುಡಿಯವರೆಗೂ ಕನ್ನಡವನ್ನು ಉಸಿರಾಗಿಸಿಕೊಂಡಿದ್ದಾರೆ. ಶೀಳನೆರೆ ಗ್ರಾಮದ ಪಶುಪಾಲನಾ ಇಲಾಖೆ ಕಚೇರಿಯಲ್ಲಿನ ಎಲ್ಲ ಕಡತಗಳನ್ನು ಕನ್ನಡಮಯವಾಗಿಸಿಕೊಂಡಿದ್ದಾರೆ.ಯಾವುದೇ ಒಂದು ಕಡತಗಳಲ್ಲಿಯೂ ನಮಗೆ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆ ಕಡತಗಳು ದೊರಕುವುದಿಲ್ಲ. ಆದರೆ ಇವರು ಬ್ಯಾಂಕಿಂಗ್ ವ್ಯವಹಾರದ ಚೆಕ್ ಬುಕ್, ಕ್ಯಾಷ್ ಬುಕ್, ಬಿಲ್ ಬುಕ್ ಸೇರಿದಂತೆ ರಾಸುಗಳ ಅಂಕಿ- ಸಂಖ್ಯೆ ದಾಖಲೆಗಳು ಎಲ್ಲವನ್ನು ಕನ್ನಡದಲ್ಲಿಯೇ ಮಾಡುತ್ತಿದ್ದಾರೆ.
ಕನ್ನಡ ಅಂಕಿ ಬಳಕೆ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಅಪಸ್ವರ ಎತ್ತಿದ್ದೂ ಉಂಟು. ಆದರೆ, ಇದಕ್ಕೆ ಜಗ್ಗದ ಅ.ನಿ.ದೇವರಾಜು ಬ್ಯಾಂಕ್ ಅಧಿಕಾರಿಗಳಿಗೂ ಬೆವರಿಳಿಸಿ ಕನ್ನಡದಲ್ಲಿಯೇ ಬ್ಯಾಂಕಿಂಗ್ ವ್ಯವಹಾರ ಮಾಡಿ ಕನ್ನಡ ಆಡಳಿತಕ್ಕೆ ಮಾದರಿಯಾಗಿದ್ದಾರೆ.
ಇದಕ್ಕೂ ಮೊದಲು ಪಾಂಡವಪುರ ತಾಲೂಕಿನ ಚಿನಕುರುಳಿಯಿಂದ ವೃತ್ತಿ ಜೀವನ ಆರಂಭಿಸಿದ ದೇವರಾಜು ಆನಂತರ ಕೆ.ಆರ್.ಪೇಟೆ, ಹರಳಹಳ್ಳಿ ಮುಂತಾದ ಪಶುಪಾಲನಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಳೆದ 14 ವರ್ಷಗಳಿಂದ ಶೀಳನೆರೆ ಪಶುಪಾಲನಾ ಕೇಂದ್ರದಲ್ಲಿ ಜಾನುವಾರು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ ಹಲವು ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು, ನೌಕರರ ವರ್ಗ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ರಾಜ್ಯದ ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಮಾದರಿ ಎನ್ನುವಂತೆ ಅ.ನಿ.ದೇವರಾಜು ಅವರು ಕನ್ನಡದಲ್ಲಿಯೇ ಇಲಾಖೆ ವ್ಯವಹಾರ ನಡೆಸುತ್ತಾ ಕನ್ನಡಾಭಿಮಾನವನ್ನು ಮೆರೆದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.