ಕನ್ನಡ ನಮ್ಮ ಪಾದೇಶಿಕತೆಯ ಭಾವನೆ: ಡಾ.ಎಂ.ಎಲ್. ಮಂಜುನಾಥ್

KannadaprabhaNewsNetwork |  
Published : Nov 22, 2025, 02:15 AM IST
ಸಿಕೆಬಿ-2 ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವವನ್ನು ಡಾ.ಕೋಡಿರಂಗಪ್ಪ ಉಧ್ಘಾಟಿಸಿದರು | Kannada Prabha

ಸಾರಾಂಶ

ರಾಜ್ಯೋತ್ಸವವು ನಾಡ ಹಬ್ಬವಾಗಿದ್ದು, ಕನ್ನಡಿಗರೆಲ್ಲರು ಸಂಭ್ರಮಿಸಬೇಕಾದ ಸಂದರ್ಭ. ಈ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ನಾಡು ನುಡಿಗಳ ಅಭಿವೃದ್ಧಿಗಾಗಿ ಕನ್ನಡವನ್ನು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡು-ನುಡಿ, ನೆಲ-ಜಲ, ಹಾಗೂ ಸಾಹಿತ್ಯ-ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿಯನ್ನು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸು ವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಒಂದು ಭಾಷೆ ಮಾತ್ರವಲ್ಲ. ಅದು ನಮ್ಮ ಪಾದೇಶಿಕತೆಯ ಭಾವನೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎಂ.ಎಲ್. ಮಂಜುನಾಥ್ ಹೇಳಿದರು.

ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿಂಡಿಮ- 2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯೋತ್ಸವವು ನಾಡ ಹಬ್ಬವಾಗಿದ್ದು, ಕನ್ನಡಿಗರೆಲ್ಲರು ಸಂಭ್ರಮಿಸಬೇಕಾದ ಸಂದರ್ಭ. ಈ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ನಾಡು ನುಡಿಗಳ ಅಭಿವೃದ್ಧಿಗಾಗಿ ಕನ್ನಡವನ್ನು ಕಟ್ಟಿಕೊಳ್ಳಬೇಕು ಎಂದರು.

ಇತರೆ ಭಾಷೆಗಳ ಪ್ರಭಾವವಿದ್ದರೂ ನಾವು ಆ ಭಾಷೆಗಳನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೇರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಭಾಷೆಗಳು ಮತ್ತು ಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕು-ಸಂಘರ್ಷ ಬೇಡ ಎಂಬ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಪ್ರಾಚೀನ ಬಾಷೆ ನಮ್ಮದು. ಆದರೆ ಇಂದು ನಾವೆಲ್ಲರೂ ನಮ್ಮ ಮಕ್ಕಳನ್ನು ಆಂಗ್ಲಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆಯೇ ಹೊರತು ನಾವು ಕಲಿತ ಸರ್ಕಾರಿ ಶಾಲೆಗಳಿಗೆ ಸೇರಿಸಲ್ಲ. ಆದ್ದರಿಂದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಅಂದರೆ ಕೆಟ್ಟದೃಷ್ಟಿಯಿಂದಲೆ ನೋಡುವ ಜನ ಇದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗೋ ಚಿಕಿತ್ಸೆ ಬೇರೆಲ್ಲೂ ಸಿಗೊಲ್ಲ ಅನ್ನುವುದಕ್ಕೆ ನಮ್ಮ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯೇ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ ಅಂತಹ ಕನ್ನಡ ಭಾಷೆಯ ಸೊಗಡನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮತ್ತು ಪಸರಿಸುವ ಕಾರ್ಯವೇ ಕನ್ನಡ ರಾಜ್ಯೋತ್ಸವವಾಗಿದೆ. ಕನ್ನಡಿಗರು ನಿರಭಿಮಾನಿಗಳಾಗದೆ, ಭಾಷಾಭಿಮಾನಿಗಳಾಗಬೇಕಿದೆ. ತಾಯಿ ಭಾಷೆಯನ್ನು ಉಳಿಸುವುದು ಕನ್ನಡಿಗರ ಕರ್ತವ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್, ಡಾ.ಆಶಾ, ಡಾ.ಸಿ.ಎಸ್.ನಾಗಲಕ್ಷ್ಮಿ, ಡಾ.ಮಂಜುಳ, ಡಾ.ಗೀತಾ, ಡಾ.ಚೈತ್ರರಾವ್, ಡಾ.ಶಂಕರಪ್ಪ, ಡಾ.ಪುಷ್ಪ, ಡಾ.ಅನಿತಾಲಕ್ಷ್ಮಿ, ಡಾ.ಭಾರ್ಗವಿ, ಡಾ.ಜ್ಯೋತಿ, ಡಾ.ಸಂದೀಪ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.

ಸಿಕೆಬಿ-2 ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವವನ್ನು ಡಾ.ಕೋಡಿರಂಗಪ್ಪ ಉದ್ಘಾಟಿಸಿದರು.

PREV

Recommended Stories

ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ
ಸೈಬರ್ ವಂಚನೆಗಳ ತಡೆಯಲು ಕೆನರಾ ಬ್ಯಾಂಕ್‌ ಆದ್ಯತೆ