ದೇಸಿ ಬೀಜಗಳ ಸಂರಕ್ಷಣೆ, ಕೃಷಿ ಜೀವವೈವಿಧ್ಯದ ಉಳಿವು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನದಲ್ಲಿ ಮಹತ್ವದ ಸಾಧನೆ ಮಾಡಿರುವ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಪ್ರತಿಷ್ಠಿತ "ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿ " ಲಭಿಸಿದೆ.
ಗಂಗಾಧರ ಡಾಂಗೆ
ಕುಂದಗೋಳ:
ದೇಸಿ ಬೀಜಗಳ ಸಂರಕ್ಷಣೆ, ಕೃಷಿ ಜೀವವೈವಿಧ್ಯದ ಉಳಿವು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನದಲ್ಲಿ ಮಹತ್ವದ ಸಾಧನೆ ಮಾಡಿರುವ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘಕ್ಕೆ ಪ್ರತಿಷ್ಠಿತ "ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿ " (Plant Genome Saviour Community Award) ಲಭಿಸಿದೆ.
₹10 ಲಕ್ಷ ನಗದು ಬಹುಮಾನ ಒಳಗೊಂಡ ಈ ರಾಷ್ಟ್ರಮಟ್ಟದ ಗೌರವ ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರ ಕೃಷಿ ಸಾಧನೆಗೆ ಸಂದ ಮನ್ನಣೆಯಾಗಿದೆ.
ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧೀನದ ಸಸ್ಯ ತಳಿ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (PPVFRA) ಈ ಪ್ರಶಸ್ತಿ ನೀಡಿದೆ. ನ. 12ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
2018ರಲ್ಲಿ ಕೇವಲ 15 ಮಹಿಳೆಯರಿಂದ ಆರಂಭವಾದ ಈ ಸಂಘವು ಸಹಜ ಸಮೃದ್ಧ ಸಂಸ್ಥೆಯ ಮಾರ್ಗದರ್ಶನದಲ್ಲಿ ಇಂದು ಸುಮಾರು 30 ಗ್ರಾಮಗಳಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಪದ್ಧತಿಯನ್ನು ಪುನರುಜ್ಜೀವನಗೊಳಿಸುತ್ತಿದೆ. ಸ್ಥಳೀಯ ಮಣ್ಣು ಮತ್ತು ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ 150ಕ್ಕೂ ಹೆಚ್ಚು ದೇಸಿ ಸಿರಿಧಾನ್ಯ ತಳಿಗಳನ್ನು ಸಂರಕ್ಷಿಸಿರುವುದು ಸಂಘದ ಪ್ರಮುಖ ಸಾಧನೆ.
ಬೀಜ ಬ್ಯಾಂಕ್:
ಅಪರೂಪದ ತಳಿಗಳ ಸಂರಕ್ಷಣೆಗಾಗಿ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಉಚಿತವಾಗಿ ಬೀಜ ವಿತರಿಸಲಾಗುತ್ತಿದೆ. ಸೆಲ್ಕೋ ಫೌಂಡೇಶನ್, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹಾಗೂ ಕೃಷಿ ಇಲಾಖೆಯ ನೆರವಿನಿಂದ ಸೌರಶಕ್ತಿ ಆಧಾರಿತ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಹಿಟ್ಟು, ರೊಟ್ಟಿ, ಶಾವಿಗೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ವಿಶ್ವಸಂಸ್ಥೆಯ ಪ್ರಶಸ್ತಿಯೂ ಒಲಿದಿತ್ತು:
2025ರಲ್ಲಿ ಸಂಘಕ್ಕೆ ವಿಶ್ವಸಂಸ್ಥೆಯ ಪ್ರತಿಷ್ಠಿತ "ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿ " ಲಭಿಸಿತ್ತು. ಇದೀಗ ರಾಷ್ಟ್ರಮಟ್ಟದ ಗೌರವವೂ ದೊರೆತಿರುವುದು ಸಂಘದ ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.
ಕೂಲಿ ಕೆಲಸ ಮತ್ತು ಗಾರ್ಮೆಂಟ್ ಕಾರ್ಖಾನೆಗೆ ಹೋಗುತ್ತಿದ್ದ ಮಹಿಳೆಯರು ಒಗ್ಗೂಡಿ ಸಂಘ ಆರಂಭಿಸಿದೆವು. ರೈತರು ಕೇವಲ ಬೆಳೆಗಾರರಲ್ಲ ಜೀವವೈವಿಧ್ಯದ ಸಂರಕ್ಷಕರು ಹಾಗೂ ಭವಿಷ್ಯದ ಆಹಾರ ಭದ್ರತೆಯ ಕಾವಲುಗಾರರು ಎಂಬ ಸಂದೇಶವನ್ನು ಈ ಪ್ರಶಸ್ತಿ ಸಾರುತ್ತದೆ.
ಬೀಬಿಜಾನ್ ಹಳೇಮನಿ, ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ ಅಂತಾರಾಷ್ಟ್ರೀಯ ಪ್ರಶಸ್ತಿಯ ಬೆನ್ನಲ್ಲೇ ಪ್ರತಿಷ್ಠಿತ ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಬೀಬಿ ಫಾತಿಮಾ ಅವರನ್ನು ಗ್ರಾಪಂ ಪರವಾಗಿ ಅಭಿನಂದಿಸುತ್ತೇನೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.