ಪಿ.ಎಸ್. ಪಾಟೀಲ
ರೋಣ/ಗಜೇಂದ್ರಗಡ: ಗಜೇಂದ್ರಗಡ ಪಟ್ಟಣದ ಜ. ತೋಂಟದಾರ್ಯ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಜರುಗಿದ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯಪ್ರೇಮಿಗಳಿಗೆ ಸಾಹಿತ್ಯ ರಸದೌತಣ ನೀಡುವ ಜತೆಗೆ ಹೊಟ್ಟೆಯೂ ಭರ್ತಿಯಾಗುವಂತೆ ಮಾಡಿದೆ.ಊಟದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.ಖಡಕ್ ರೊಟ್ಟಿ, ಬದನೆಕಾಯಿ ಪಲ್ಯೆ, ಮೂಲಂಗಿ, ಸೌತೆಕಾಯಿ, ಹೆಸರು ಕಾಳು ಪಲ್ಯೆ, ಕಡಲೆ ಚಟ್ನಿ, ಉಪ್ಪಿನಕಾಯಿ, ಗೋದಿ ಹುಗ್ಗಿ ಮತ್ತು ಹಾಲುಬೂಂದಿ, ಮೈಸೂರು ಪಾಕ, ಶೇಂಗಾ ಹೋಳಿಗೆ, ಅನ್ನ-ಸಾಂಬಾರು... ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ಸಾಹಿತ್ಯಪ್ರೇಮಿಗಳಿಗೆ ಉಣಬಡಿಸಲಾಯಿತು. ಮಹಿಳೆಯರಿಗೆ, ಪುರುಷರಿಗೆ 10ಕ್ಕೂ ಹೆಚ್ಚು ಊಟದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಊಟದ ವೇಳೆ ನೂಕುನುಗ್ಗಲು, ಅವ್ಯವಸ್ಥೆಯಾಗದಂತೆ ಆಯೋಜಕರು ನೋಡಿಕೊಂಡರು. ಜನರು ಸರದಿಯಲ್ಲಿ ನಿಂತು ಸಮಾಧಾನದಿಂದ ಊಟ ಮಾಡಿದರು.
ಕೈ ಬೀಸಿ ಕರೆದ ಪುಸ್ತಕ ಮಳಿಗೆಗಳು: ಪುಸ್ತಕ ಮಾರಾಟ ಮಳಿಗೆಗಳು ಸಾಹಿತ್ಯಾಸಕ್ತರನ್ನು ಆಕರ್ಷಿಸಿದವು. ಗದಗ ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಬಸವ ಪ್ರಕಾಶನ, ಗದಗ ಮಾರುತಿ ಪುಕ್ ಡಿಪೋ, ಧಾರವಾಡ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ, ಕಂಸ ಪ್ರಕಾಶನ, ಅಂಬು ಪ್ರಕಾಶನ, ಅಕ್ಷರ ಸಂಗಾತ ಪುಸ್ತಕ ಮಾರಾಟ ಮಳಿಗಳು ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯುತ್ತಿದ್ದವು. ಸಾಹಿತ್ಯ, ಕಲೆ, ಇತಿಹಾಸ ಅನಾವರಣಗೊಳಿಸುವ ಪುಸ್ತಕಗಳ ದೊಡ್ಡ ರಾಶಿಯೇ ಇದ್ದವು.ಗದಗ ವಿಜಯ ಕಲಾ ಮಂದಿರ ಚಿತ್ರಕಲಾ ಮಹಾವಿದ್ಯಾಲಯ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನ, ಗದಗ ವಿದ್ಯಾದಾನ ಸಮಿತಿಯ ಜೆ.ಎನ್. ಚಿತ್ರಕಲಾ ಮಹಾವಿದ್ಯಾಲಯ, ವಿಜಯ ಕಾಲೇಜ್ ಆಫ್ ಫೈನ್ ಆರ್ಟ್ಸ್ ವತಿಯಿಂದ ಏಪರ್ಡಿಸಿದ ಚಿತ್ರಕಲಾ ಪ್ರದರ್ಶನ, ಸಾಹಿತಿ ಪುಂಡಲೀಕ ಕಲ್ಲಿಗೂರ ಅವರ ಚಿತ್ರಕಲಾ ಪ್ರದರ್ಶನ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿಧಾನ್ಯ ಉತ್ಪನ್ನ ಮಾರಾಟ ಮಳಿಗೆಗೆ ಜನರು ಭೇಟಿ ನೀಡಿದರು.
ರಕ್ತದಾನ ಶಿಬಿರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಉಚಿತ ಆರೋಗ್ಯ ತಪಾಸಣೆ ಶಿಬಿರ, ಗದಗ ಅಂಬಿಕಾ ರಕ್ತ ಭಂಡಾರ ವತಿಯಿಂದ ರಕ್ತದಾನ ಶಿಬಿರ ಮಳಿಗೆಗಳನ್ನು ತೆರೆಯಲಾಗಿತ್ತು.ಮಂಗಳವಾರವೂ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು, ವಸ್ತು ಪ್ರದರ್ಶನ ಮಳಿಗೆಗಳು ಇರುತ್ತವೆ. ಸಾಹಿತ್ಯಾಸಕ್ತರು ಸಮ್ಮೇಳನದ ಸವಿ ಅನುಭವಿಸುವ ಜತೆಗೆ ಪುಸ್ತಕ ಮಳಿಗೆಗಳಿಗೆ, ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಆಕರ್ಷಣೆಯವಾಗಿ, ವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಪುಸ್ತಕ ಮಾರಾಟ ಮಳಿಗೆಗಳು, ಅಲ್ಲಿನ ಪುಸ್ತಕಗಳು ಗಮನ ಸೆಳೆಯುತ್ತಿದ್ದವು. ನಾನಂತು ನನಗಿಷ್ಟವಾದ ಸಾಕಷ್ಟು ಪುಸ್ತಕಗಳನ್ನು ಖರೀದಿಸಿದೆ. ಸಮ್ಮೇಳನ ಖುಷಿ ನೀಡಿತು ಎಂದು ಕೊತಬಾಳದ ಸಾಹಿತಿ ಗೀತಾ ಶ್ರೀ ಯಾಳಗಿ ಹೇಳಿದರು.