30ರಂದು ಉದ್ಯೋಗ ಮೇಳ ಆಯೋಜನೆ
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ೨೦೨೪-೨೫ನೇ ಸಾಲಿನಲ್ಲಿ ಬಿ.ಕಾಂ. ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಪ್ ಎಂಬಾಡೆಂಡ್ ಡಿಗ್ರಿ ಪ್ರೋಗ್ರಾಮ್ ಎಂಬ ನೂತನ ಕೋರ್ಸ್‌ನ್ನು ಪ್ರಾರಂಭಿಸಲು ಮುಂದಾಗಿದ್ದು, ಶಿಕ್ಷಣದ ಜೊತೆಯಲ್ಲಿ ಉದ್ಯೋಗದ ಮೂಲಕ ಗಳಿಕೆ ಮಾಡಬಹುದು. ಮೇ.೩೦ ರ ಗುರುವಾರ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಕೆ.ಜಿ.ಕವಿತ ಮತ್ತು ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ರಾಜಶೇಖರ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಈ ಹೊಸ ಕೋರ್ಸು ಈಗಾಗಲೇ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದು, ನಮ್ಮ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಗದಗ, ಧಾರವಾಡ, ಹಾವೇರಿ, ಮೈಸೂರು ಮತ್ತು ಹಾಸನ ಸೇರಿ ೬ ಜಿಲ್ಲೆಗಳಲ್ಲಿ ಈ ಕೋರ್ಸ್‌ನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಅದರಲ್ಲಿ ನಮ್ಮ ಕಾಲೇಜು ಕೂಡ ಒಂದಾಗಿದೆ. ಈ ಕೋರ್ಸ್ ಮೂರು ವರ್ಷದ ಪದವಿಯಾಗಿದ್ದು, ಪ್ರಥಮ ಮತ್ತು ದ್ವಿತೀಯ ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಮತ್ತು ಅಂತಿಮ ವರ್ಷ ಖಾಸಗಿ ಕಂಪನಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.‘ತರಬೇತಿ ಅವಧಿಯಲ್ಲಿ ೭೦೦೦ ರು. ರಿಂದ ೧೦೦೦೦ ರು. ಸ್ಪೆಫಂಡ್ ನೀಡುತ್ತಾರೆ. ಕಾಲೇಜು ಶಿಕ್ಷಣ ಇಲಾಖೆಯು ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ನೂತನ ಕೋರ್ಸ್‌ಗೆ ಒಂದು ವರ್ಷದಲ್ಲಿ ೬೦ ವಿದ್ಯಾರ್ಥಿಗಳಿಗೆ ಮಾತ್ರ ಕಲಿಯಲು ಅವಕಾಶ ಸಿಗಲಿದೆ. ೨ ವರ್ಷ ಕಾಲೇಜಿನಲ್ಲೇ ವ್ಯಾಸಂಗ ಮಾಡಿದ ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕಾರ್ಖಾನೆ ಅಥವಾ ಕಂಪನಿಗಳಲ್ಲೇ ಉಳಿದು ಕೆಲಸ ಮಾಡಬೇಕು. ಆ ಅವಧಿಯಲ್ಲಿ ಮಾಸಿಕ ೧೦ ಸಾವಿರ ರು. ಸೈಫಂಡ್ ಸಿಗಲಿದೆ’ ಎಂದು ತಿಳಿಸಿದರು.
ಮೇ ೩೦ರ ಗುರುವಾರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕೆ. ಹರ್ಷ, ಯೋಗೀಶ್, ಮಂಜುಳ, ಮಧುಸೂದನ್ ಇತರರು ಇದ್ದರು.