ಚಿರತೆ ದಾಳಿಗೆ ಒಂದು ವರ್ಷದ ಕರು ಬಲಿ

KannadaprabhaNewsNetwork | Published : Mar 22, 2024 1:08 AM

ಸಾರಾಂಶ

ಚಿರತೆ ದಾಳಿಗೆ ಒಂದು ವರ್ಷದ ಕರು ಅಸುನೀಗಿದ ಘಟನೆ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಿಂಭಾಗದಲ್ಲಿ ಗುರುವಾರ ನಡೆದಿದೆ.

ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದಲ್ಲಿ ಘಟನೆಕನ್ನಡಪ್ರಭ ವಾರ್ತೆ ಕನಕಗಿರಿ

ಚಿರತೆ ದಾಳಿಗೆ ಒಂದು ವರ್ಷದ ಕರು ಅಸುನೀಗಿದ ಘಟನೆ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಿಂಭಾಗದಲ್ಲಿ ಗುರುವಾರ ನಡೆದಿದೆ.

ಶಾಲೆಯ ಹಿಂಭಾಗದಲ್ಲಿ ಹನುಮಂತಪ್ಪ ತಳವಾರಗೆ ಸೇರಿದ ಜಮೀನಿನಲ್ಲಿ ಕಟ್ಟಲಾಗಿದ್ದ ದೊಡ್ಡ ಜಾನುವಾರುಗಳ ಮೇಲೆ ನಡೆಸಿದ ದಾಳಿ ವಿಫಲವಾಗಿದೆ. ಈ ಜಾನುವಾರುಗಳ ಗುಂಪಿನಲ್ಲಿ ಒಂದು ವರ್ಷದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ. ರೈತ ಮಹಿಳೆ ಹನುಮವ್ವ ಬಾಳಪ್ಪ ತಳವಾರ ಕರು ಚಿರತೆ ದಾಳಿಗೆ ಸಿಲುಕಿ ಮೃತಪಟ್ಟಿರುವುದನ್ನು ನೋಡಿ ಕಣ್ಣೀರಿಟ್ಟರು.

ಮಾಹಿತಿ ಆಧರಿಸಿ ಉಪ ಅರಣ್ಯಾಧಿಕಾರಿ ಹನುಮಂತಪ್ಪ ಹಾಗೂ ಗಸ್ತು ಅರಣ್ಯ ಪಾಲಕ ದಾವುಲ್‌ಸಾಬ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಹೆಜ್ಜೆ ಗುರುತು ಹಾಗೂ ಕರುವಿನ ಮೇಲೆ ದಾಳಿ ನಡೆಸಿದ ಉಗುರಿನ ಗುರುತನ್ನು ವೀಕ್ಷಿಸಿ ಚಿರತೆ ದಾಳಿ ನಡೆಸಿರುವುದು ದೃಢಪಡಿಸಿದರು. ಇದಕ್ಕೂ ಮೊದಲು ಪಶು ಸಂಗೋಪನಾ ಇಲಾಖೆಯ ರಿಷಜ್ಞ ಹಾಗೂ ಮಲಕಪ್ಪ ಚಿರತೆ ದಾಳಿಗೆ ಮೃತಪಟ್ಟಿದ್ದ ಕರುವಿನ ಮಾದರಿ ಮಾಂಸವನ್ನು ಸಂಗ್ರಹಿಸಿಕೊಂಡರು.

ಇ-ತಂತ್ರಾಂಶದಲ್ಲಿ ಹಾನಿಯಾಗಿರುವ ಕುರಿತಂತೆ ದಾಖಲಿಸಿ ಪರಿಹಾರಕ್ಕೆ ಆನ್‌ಲೈನ್ ಅರ್ಜಿ ಹಾಕಲಾಗುವುದು. ನಷ್ಟ ಅನುಭವಿಸಿದ ರೈತನ ಬ್ಯಾಂಕ್ ಖಾತೆಗೆ ಸರ್ಕಾರ ಪರಿಹಾರದ ಮೊತ್ತ ಜಮೆಯಾಗಲಿದೆ. ಚಿಕ್ಕಮಾದಿನಾಳ ಸುತ್ತಮುತ್ತ ಗುಡ್ಡಗಳಿರುವುದರಿಂದ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಕುಡಿಯಲು ನೀರು, ಆಹಾರದ ಸಮಸ್ಯೆ ಇದೆ. ಅನಿವಾರ್ಯವಾಗಿ ಗ್ರಾಮದತ್ತ ಚಿರತೆಗಳು ಮುಖ ಮಾಡುತ್ತಿವೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಈ ವೇಳೆ ಪಶು ಸಖಿ ಶಶಿರೇಖಾ ಬೆಟಗೇರಿ, ರೈತರಾದ ಹನುಮಂತಪ್ಪ ತಳವಾರ, ಷಣ್ಮುಖಪ್ಪ ಆಗೋಲಿ, ಅಮರೇಶ ಜನಮನಿ, ಗುರುಶಾಂತಪ್ಪ ಇತರರಿದ್ದರು.

ಹಲವು ದಿನಗಳಿಂದ ಚಿರತೆಯೊಂದು ಬಹಳ ಕಾಟ ಕೊಡುತ್ತಿದೆ. ಈ ಹಿಂದೆ ಎರಡು ನಾಯಿಗಳು ಹಾಗೂ ಒಂದು ವರ್ಷದ ಕರುವನ್ನು ಕೊಂದಿದೆ. ಈಗ ಮತ್ತೆ ಕರುವನ್ನು ತಿಂದಿದೆ. ಹೀಗಾದರೆ ರೈತರು ಜೀವನ ನಡೆಸುವುದ ಹೇಗೆ? ಚಿರತೆ ಹಾವಳಿಗೆ ನಾಯಿಗಳ ಸಂಖ್ಯೆಯೂ ಕಡಿಮೆಯಾಗಿದೆ. ರಾತ್ರಿ ಸಮಯದಲ್ಲಿ ಹೊಲ, ತೋಟದಲ್ಲಿ ರೈತರು ಇರಲಾರದ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ಬೋನು ಇರಿಸಿ ಚಿರತೆ ಹಿಡಿಯುವಂತಾಗಬೇಕು ಎಂದು ರೈತ ಶರಣಪ್ಪ ಆಗೋಲಿ ಆಗ್ರಹಿಸಿದ್ದಾರೆ.

Share this article