ಕನ್ನಡಪ್ರಭ ವಾರ್ತೆ ಆಲೂರು
ವೇಷಭೂಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜ್ಞಾನವಿ, ದ್ವಿತೀಯ ಬಹುಮಾನ ಪರೀಕ್ಷಿತ್, ತೃತೀಯ ಬಹುಮಾನ ಪೂರ್ವಿತ್ ಹಾಗೂ ತನ್ವಿ ಶಮಿತ್ ಗೌಡ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದರಲ್ಲಿ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸೆಸ್ಕಾಂ ಇಲಾಖೆಯ ನೂರಕ್ಕೂ ಹೆಚ್ಚು ನೌಕರರಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ನೆರವೇರಿಸಿದ್ದು ವಿಶೇಷವಾಗಿತ್ತು.
ತಾಲೂಕಿನಲ್ಲಿ ಪ್ರಪ್ರಥಮವಾಗಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ " ಎತ್ತುಗಳ ಪ್ರದರ್ಶನ " ಸಾರ್ವಜನಿಕರ ಗಮನ ಸೆಳೆಯಿತು. ಮೊದಲ ಬಾರಿಗೆ ವಿಶೇಷವಾಗಿ ಜೋಡೆತ್ತುಗಳ ಪ್ರದರ್ಶನ ಆಯೋಜನೆ ರೈತರ ಉತ್ಸಾಹವನ್ನು ಹೆಚ್ಚಿಸಿತ್ತು. ರೈತರು ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಎತ್ತುಗಳ ಕೋಡುಗಳಿಗೆ ಕೋಡಂಣ್ಸು, ಗೊಂಡೆ, ಕೊರಳಿಗೆ ಗುಗ್ಗರಿ, ಹಣೆಗೆಜ್ಜೆ, ಮೈಮೇಲೆ ಜೂಲು, ನೋಡುಗರ ಕಣ್ಣು ಎತ್ತುಗಳ ಮೇಲೆ ಬೀಳದಿರಲಿ ಎಂದು ರೈತರು ಕರಿಹಗ್ಗ ಕಟ್ಟಿದ್ದರು.ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ (ಕುರುಬೂರು ಶಾಂತಕುಮಾರ್ ಬಣ) ಅಧ್ಯಕ್ಷ ಎಚ್ ಬಿ ಧರ್ಮರಾಜ್ ಮಾತನಾಡಿ, ಎತ್ತುಗಳ ಸಾಕಾಣಿಕೆ ನಮ್ಮ ಕುಟುಂಬಗಳ ಸಂಪ್ರದಾಯ. ನಾಲ್ಕು ತಲೆಮಾರುಗಳಿಂದ ಪ್ರತಿಯೊಬ್ಬರು ಎತ್ತುಗಳನ್ನು ಸಾಕುತ್ತಿದ್ದರು, ಮನೆಯಲ್ಲಿ ಎತ್ತುಗಳ ಸಾಕಣೆ ಎಂದರೆ ಅದು ಕೇವಲ ಹವ್ಯಾಸವಲ್ಲ, ಅದು ನಮ್ಮ ಬದುಕಿನ ಭಾಗ. ಪ್ರಸ್ತುತ ಕೃಷಿ ಯಾಂತ್ರೀಕರಣ ಆಗುತ್ತಿರುವುದರಿಂದ ಎತ್ತುಗಳ ಸಾಕಾಣಿಕೆಯಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ. ಎತ್ತುಗಳನ್ನು ಅತ್ಯಂತ ಕಾಳಜಿಯಿಂದ ಯಾವುದೇ ಕೊರತೆಯಿಲ್ಲದೆ ಮನೆಯ ಮಕ್ಕಳಂತೆ ಸಾಕಬೇಕು. ನಾಟಿ ತಳಿಯ ಎತ್ತುಗಳು ನಶಿಸಬಾರದು ಅವುಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 5 ಸಾವಿರ ನಗದು ಬಹುಮಾನ ದೊಂದಿಗೆ ಪ್ರಥಮ ಸ್ಥಾನವನ್ನು ಭವಾನಿ ಮಧು, 3 ಸಾವಿರ ನಗದು ಬಹುಮಾನವನ್ನು ಮಮತಾ ಕಾಂತರಾಜು, ಕಾಂಚನ 2 ಸಾವಿರ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡರು.