ಬಸವರಾಜ ಕಟ್ಟಿಮನಿ
ರೈತನ ನಿಜವಾದ ಮಿತ್ರ ಎಂದರೆ ಅದು ಎತ್ತುಗಳು. ಹಿಡಿ ಹುಲ್ಲಿಗಾಗಿ ಇಡೀ ಜೀವನವನ್ನೆ ಅನ್ನದಾತನಿಗೆ ಸಮರ್ಪಿಸುವ ನಿಜವಾದ ಜೀವಂತ ದೇವರುಗಳೇ ಈ ಎತ್ತುಗಳು. ತಾಲೂಕಿನ ಮಾರಲಭಾವಿ ಗ್ರಾಮದ ಶಿವಶರಣಪ್ಪಗೌಡ ಮಾಲಿ ಪಾಟೀಲ್ ಅವರ ಜೋಡೆತ್ತುಗಳು ಮಾಡಿದ ಸಾಧನೆಯು ನಿಜಕ್ಕೂ ನಿಬ್ಬೆರಗಾಗುವಂತಿದೆ. ಕೇವಲ 12 ಗಂಟೆಗಳಲ್ಲಿ 28 ಎಕರೆ ತೊಗರಿ ಬೆಳೆಯಲ್ಲಿ ಕುಂಟೆ ಹೊಡೆಯುವ ಮೂಲಕ ಟ್ರಾಕ್ಟರ್‌ಗಳನ್ನೆ ಮೀರಿಸಿ ಸಾಧನೆ ಮಾಡಿವೆ.
ಮಾರಲಭಾವಿ ಗ್ರಾಮದ ಕೆಸಯ್ಯ ಲಕ್ಷಮಯ್ಯ ಶೆಟ್ಟಿ ಎಂಬುವರ 28 ಎಕರೆ ತೊಗರಿ ಬೆಳೆಯಲ್ಲಿ ಮಂಗಳವಾರ ಬೆಳಗ್ಗೆ 3 ಗಂಟೆಗೆ ಎತ್ತುಗಳ ಕೊರಳಲ್ಲಿ ಜತಗ (ಕೊರಳಪಟ್ಟಿ) ಇಲ್ಲದೆ ಮೌನೇಶ ಹುಲಿಬೆಂಚಿ ದಿಂಡಿನ ಮೇಲೆ ನಿಂತು 12 ಗಂಟೆಯೊಳಗೆ 28 ಎಕರೆ ಕುಂಟಿ ಹೊಡೆಯುವ ಮೂಲಕ ಎತ್ತುಗಳು ಸಾಧನೆ ಮಾಡಿವೆ. ಇದಕ್ಕೆ ಕಾಶಿನಾಥ, ಬಾಪುಗೌಡ ಪಾಟೀಲ್ ಅವರು ಸಹಕರಿಸಿದ್ದಾರೆ ಎಂದು ಗ್ರಾಮದ ರೈತ ದೇವೆಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.ಎತ್ತುಗಳ ಸಾಮರ್ಥ್ಯ, ಕುಂಟೆ ಹೊಡೆಯುವ ರೈತರ ಸಾಮರ್ಥ್ಯಕ್ಕೆ ತಕ್ಕಂತೆ ಇಂತಿಷ್ಟು ಗಂಟೆಗೆ ಇಂತಿಷ್ಟು ಹೊಲದಲ್ಲಿ ಉಳುಮೆ ಮಾಡಬಹುದು ಎಂದು ಅಂದಾಜಿಸಬಹುದಾಗಿದೆ. ಸಾಮಾನ್ಯವಾಗಿ ಜೋಡೆತ್ತುಗಳ ಮೂಲಕ ರೈತರು 10 ಗಂಟೆಯಲ್ಲಿ 7 ರಿಂದ 8 ಎಕರೆಯಲ್ಲಿ ಉಳುಮೆ ಮಾಡಬಹುದು. ಅದು ಸತತವಾಗಿ 10 ಗಂಟೆ ಉಳುಮೆ ಮಾಡೋದು ಕಷ್ಟ-ಸಾಧ್ಯ. ಆಗಾಗ್ಗ ಬ್ರೇಕ್ ತೆಗೆದುಕೊಂಡು ಉಳುಮೆ, ಹರಗುವಿಕೆ, ರೆಂಟೆ ಕಾರ್ಯಗಳನ್ನ ಮಾಡಲಾಗುತ್ತೆ. ಆದ್ರೆ ಇಲ್ಲಿ ಕೇವಲ 12 ಗಂಟೆಯಲ್ಲಿ 28 ಏಕರೆ ಕುಂಟೆ ಹೊಡೆಯುವುದು ಸಾಮಾನ್ಯ ಮಾತಲ್ಲ. ಟ್ರಾಕ್ಟರ್ ಮೂಲಕವೂ 28 ಎಕರೆ ತನಕ ಹರಗುವುದು ಕಷ್ಟ.
ಸಾಧನೆ ಮಾಡಿದ ಜೋಡೆತ್ತುಗಳನ್ನು ಕುಂಟಿ ಹೊಡೆದ ಹೊಲದಿಂದ ಡಿಜೆ ಮೆರವಣಿಗೆ ಮೂಲಕ ಗ್ರಾಮದ ಆಂಜನೇಯ ದೇವಸ್ಥಾನ, ಗ್ರಾಮದೇವತೆ ದೇವಸ್ಥಾನದ ಮೂಲಕ ಮೆರವಣಿಗೆ ಮಾಡಿ ನಂತರ, ಹಳೇ ಸಂಪ್ರದಾಯದಂತೆ ಸಾಧನೆ ಮಾಡಿದ ಎತ್ತುಗಳನ್ನು ಬೀಗರ (ಮಾವನವರ) ಮನೆಯಲ್ಲಿ ಒಂದು ದಿನ ಬಿಡುತ್ತಾರೆ. ಅದರಂತೆ, ನಮ್ಮ ಮಾವನವರಾದ ಮಾನಪ್ಪ ಮುರಡಿ ಅವರು ಎತ್ತುಗಳಿಗೆ ಆರತಿ ಬೆಳಗಿ ಮನೆಯೊಳಗೆ ಸ್ವಾಗತಿಸುತ್ತಾರೆ ಎಂದು ರೈತ ಶಿವಶರಣಪ್ಪಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.