ಬೂದುಗುಂಪಾ ಸರ್ಕಾರಿ ಶಾಲೆಗೆ ಕುಡುಕರನ್ನು ತಪ್ಪಿಸಲು ಗಸ್ತು

KannadaprabhaNewsNetwork |  
Published : Jan 08, 2024, 01:45 AM IST
ಕಾರಟಗಿ ತಾಲೂಕಿನ ಬೂದುಗುಂಪಾ ಸರಕಾರಿ ಪ್ರೌಢಶಾಲೆಗೆ ಗಂಗಾವತಿ ಬಿಇಓ ವೆಂಕಟೇಶ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು. | Kannada Prabha

ಸಾರಾಂಶ

ಬೂದುಗುಂಪಾ, ಹಾಲಸಮುದ್ರ, ತಿಮ್ಮಾಪುರದ ಗ್ರಾಮಗಳಿಗೆ ಸೇರಿದ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಈ ಸ್ಥಿತಿ ಬಂದಿರುವ ಕುರಿತು ಪ್ರಕಟವಾದ ವರದಿ ಗಮನಿಸಿದ್ದಾರೆ.

ಕಾರಟಗಿ: ತಾಲೂಕಿನ ಬೂದುಗುಂಪಾದ ಸರ್ಕಾರಿ ಪ್ರೌಢಶಾಲೆಗೆ ಮೂಲ ಸೌಲಭ್ಯ ಒದಗಿಸುವ ಜತೆಗೆ ರಾತ್ರಿ ಕುಡುಕರ ಹಾವಳಿ ತಪ್ಪಿಸಲು ಸ್ವತಃ ಗ್ರಾಮದ ಯುವಕರು, ಹಳೇ ವಿದ್ಯಾರ್ಥಿಗಳು ಈಗ ನಿತ್ಯ ರಾತ್ರಿ ಗಸ್ತು ನಡೆಸಲು ನಿರ್ಧರಿಸಿದ್ದಾರೆ.

''''ಕನ್ನಡಪ್ರಭ''''ದಲ್ಲಿ ಜ. 4ರಂದು "ಕತ್ತಲೆಯಾಗುತ್ತಿದ್ದಂತೆಯೇ ಬಾರ್‌ ಆಗಿ ಬದಲಾಗುವ ಶಾಲಾ ಮೈದಾನ " ಶೀರ್ಷಿಕೆಯಡಿ ವಿವರವಾದ ವರದಿ ಪ್ರಕಟಿಸಿತ್ತು. ಬೂದುಗುಂಪಾ, ಹಾಲಸಮುದ್ರ, ತಿಮ್ಮಾಪುರದ ಗ್ರಾಮಗಳಿಗೆ ಸೇರಿದ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಈ ಸ್ಥಿತಿ ಬಂದಿರುವ ಕುರಿತು ಪ್ರಕಟವಾದ ವರದಿ ಗಮನಿಸಿದ್ದಾರೆ. ಬಳಿಕ ಕುಡುಕರಿಂದ ಶಾಲೆ ಮೈದಾನ ಹಾಳು ಮಾಡುವುದನ್ನು ತಪ್ಪಿಸಲು ಬೂದುಗುಂಪಾ ಗೆಳೆಯ ಬಳಗದಿಂದ ನಿತ್ಯ ನಾಲ್ಕೈದು ಗೆಳೆಯರು ಒಗ್ಗೂಡಿ ಗಸ್ತು ತಿರುಗಲು ನಿರ್ಧರಿಸಿದ್ದಾರೆ.ಗುರುವಾರ ಬೆಳಗ್ಗೆ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶಾಲೆ ಸ್ಥಿತಿಯ ಕುರಿತು ಗಂಭೀರವಾಗಿ ಚರ್ಚಿಸಿ, ಶಾಲೆ ರಕ್ಷಣೆ ಮಾಡಲು ತೀರ್ಮಾನಿಸಿದ್ದಾರೆ. ಆ ಪ್ರಕಾರ ನಿತ್ಯ ಶಾಲೆ ಮುಗಿದ ಬಳಿಕ ಸಂಜೆ ೬.೩೦ರಿಂದ ರಾತ್ರಿ ೧೦ರ ವರೆಗೆ ಶಾಲೆ ಮೈದಾನದಲ್ಲಿ ಕಾವಲು ಕಾಯುವ ಮೂಲಕ ರಕ್ಷಣೆ ಮಾಡಬೇಕು. ಜತೆಗೆ ಈ ವೇಳೆ ಶಾಲೆ ಮೈದಾನ ಪ್ರವೇಶಿಸುವವರಿಗೆ ತಿಳಿ ಹೇಳಬೇಕು. ಇದು ಶಾಲೆ, ಎಲ್ಲರ ಮಕ್ಕಳು ಓದುವ ದೇವಸ್ಥಾನ ಎಂದು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ.ಗ್ರಾಪಂ ಸದಸ್ಯ ಹಾಗೂ ಹಳೆಯ ವಿದ್ಯಾರ್ಥಿ ಶ್ರೀಧರ್ ಗೋನಾಳ ಅವರ ತಂಡ ಶಾಲೆ ಮೈದಾನಕ್ಕೆ ತೆರಳಿ ಅಲ್ಲಿ ಮದ್ಯ ಸೇವಿಸುತ್ತ ಕುಳಿತಿದ್ದ ಹಲವು ಗುಂಪುಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇನ್ಮುಂದೆ ಶಾಲೆ ಮೈದಾನದತ್ತ ಬಾರದಂತೆ ತಿಳಿ ಹೇಳಿ ಕೊನೆಯ ಎಚ್ಚರಿಕೆ ನೀಡುವ ಕೆಲಸ ಮಾಡಿದೆ. ಅಮಲಿನಲ್ಲಿದ್ದ ಕೆಲವರು ಮಾತು ಕೇಳದ್ದಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ವಶಕ್ಕೆ ನೀಡುವ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಗ್ರಾಮಸ್ಥರೊಂದಿಗೆ ಸಭೆ:

ಇನ್ನು ವಿವಿಧ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಶಾಲೆಗೆ ಮೂಲ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆಂದು ಶಾಲೆ ಉಳಿವಿಗಾಗಿ ಹೋರಾಟ ನಡೆಸಿದ್ದ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಶಿವಕುಮಾರ ಗೌಡ ತೆಕ್ಕಲಕೋಟೆ ತಿಳಿಸಿದ್ದಾರೆ.ಗಂಗಾವತಿ ಬಿಇಒ ಆರ್. ವೆಂಕಟೇಶ ಶುಕ್ರವಾರ ಸಂಜೆ ಭೇಟಿ ನೀಡಿ ಶಾಲೆ ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಈ ವೇಳೆ ಹಿಂದಿ ಶಿಕ್ಷಕರ ಸಮಸ್ಯೆ ಕುರಿತು ವ್ಯವಸ್ಥೆ ಮಾಡಿದ್ದು, ವಾರಕ್ಕೆ ಮೂರು ದಿನ ಹಿಂದಿ ಶಿಕ್ಷಕರನ್ನು ಎರವಲು ಸೇವೆಗೆ ನಿಗದಿ ಮಾಡಲಾಗಿದೆ ಎಂದರು.ಶಾಲೆಗೆ ಕುಡುಕರ ಹಾವಳಿ ತಪ್ಪಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಅವರು ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

ಕಾರಟಗಿ ಠಾಣೆ ಪಿಎಸ್‌ಐ ಕಾಮಣ್ಣ ನಾಯ್ಕ್ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಗ್ರಾಮದ ಯುವಕರೊಂದಿಗೆ ಸಭೆ ನಡೆಸಿದರು. ರಾತ್ರಿ ವೇಳೆ ಕುಡುಕರ ಹಾವಳಿ ತಪ್ಪಿಸಲು ಬೀಟ್ ಪೋಲಿಸರನ್ನು ನೇಮಕ ಮಾಡುತ್ತೇವೆ. ಅಬಕಾರಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಡಂಬಳ ಈ ವೇಳೆ ಇದು ಶಾಲೆ ಎದುರಿಸುವ ಸಮಸ್ಯೆ ವಿವರಿಸಿ ಅಧಿಕಾರಿಗಳ ಗಮನಕ್ಕೆ ತಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ