ನೂತನ ವರ್ಷಕ್ಕೆ ಸಂಭ್ರಮದ ಸ್ವಾಗತ

KannadaprabhaNewsNetwork |  
Published : Jan 02, 2025, 12:31 AM IST
3 | Kannada Prabha

ಸಾರಾಂಶ

ಗರದ ಕಾಸ್ಮೋಪಾಲಿಟನ್ ಕ್ಲಬ್, ಸಂದೇಶ್ ದಿ ಪ್ರಿನ್ಸ್ ಸೇರಿದಂತೆ ಅನೇಕ ಹೊಟೇಲ್ಗಳು, ಕ್ಲಬ್ಗಳಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರುಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ನಗರದಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆ ನೆರವೇರಿತು.ನಗರದ ಅನೇಕ ಸ್ಟಾರ್ ಹೊಟೇಲ್ಗಳು, ಕ್ಲಬ್ ಗಳಲ್ಲಿ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಅನೇಕ ಮಂದಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ನೂತನ ವರ್ಷವನ್ನು ಬರಮಾಡಿಕೊಂಡರು.ನಗರದ ಕಾಸ್ಮೋಪಾಲಿಟನ್ ಕ್ಲಬ್, ಸಂದೇಶ್ ದಿ ಪ್ರಿನ್ಸ್ ಸೇರಿದಂತೆ ಅನೇಕ ಹೊಟೇಲ್ಗಳು, ಕ್ಲಬ್ಗಳಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದರು. ನಿಟ್ಟುಸಿರು ಬಿಟ್ಟ ಪೊಲೀಸರು ನಿರಾಳಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಅಹಿತಕರ ಘಟನೆ ನಡೆಯದ ಹಿನ್ನೆಲೆಯಲ್ಲಿ ಪೊಲೀಸರು ನಿರಾಳರಾದರು. ಇಡೀ ರಾತ್ರಿ ಎಲ್ಲಾ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಮಹಿಳೆಯರನ್ನು ಚುಡಾಯಿಸುವುದು, ಕೀಟಲೆ ಮಾಡದಂತೆ ನೋಡಿಕೊಳ್ಳಲು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ಗರುಡ, ಚಾಮುಂಡಿ ವಾಹನ ಸೇರಿದಂತೆ ಎಲ್ಲಾ ಪೊಲೀಸ್ ವಾಹನಗಳು ಗಸ್ತು ತಿರುಗಿ ಮುಂಜಾನೆ ತನಕ ಕೆಲಸ ನಿರ್ವಹಿಸಿದರು. ಈ ಬಾರಿ ಯಾವುದೇ ಅಹಿಕತರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಯಾಯ ಪೊಲೀಸ್ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ಗಳು ರಾತ್ರಿ ಇಡೀ ಕಟ್ಟೆಚ್ಚರವಹಿಸಿದ್ದರು.ಸಮಯ ಮುಗಿದ ಮೇಲೆ ಪಾರ್ಟಿ ಮುಗಿಸುವಂತೆ ನೋಡಿಕೊಂಡು ಸುರಕ್ಷಿತವಾಗಿ ಮನೆಗೆ ಸೇರುವಂತೆ ಮಾಡಿದರು. ಪ್ರವಾಸಿ ತಾಣಗಳು ಫುಲ್ ರಶ್ಹೊಸ ವರ್ಷದ ಮೊದಲ ದಿನವಾದ ಬುಧವಾರ ನಗರದ ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ವಸ್ತು ಪ್ರದರ್ಶನಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿತ್ತು. ಮೈಸೂರು, ಬೆಂಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನೆರೆಯ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡಿದ್ದರು.ಅರಮನೆ, ಚಾಮರಾಜೇಂದ್ರ ಮೃಗಾಲಯ ಮುಂತಾದ ಕಡೆ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಯಿತು.ನಗರದ ಅನೇಕ ಕಾಲೇಜುಗಳ ಯುವಕ - ಯುವತಿಯರು, ಸ್ನೇಹಿತರು ವಿಶೇಷ ಉಡುಗೆಯನ್ನು ತೊಟ್ಟು ಸಂಭ್ರಮಿಸಿ ಸ್ನೇಹಿತರನ್ನು ಭೇಟಿಯಾಗಿ ಶುಭಾಶಯ ಕೋರಿದರು.ಹೊಟೇಲ್ ಗಳು, ಶಾಪಿಂಗ್ ವಾಲ್ ಗಳಲ್ಲಿ ವ್ಯಾಪಾರದ ಭರಾಟೆ ಹೆಚ್ಚಾಗಿತ್ತು. ಶಾಲಾ - ಕಾಲೇಜುಗಳಲ್ಲಿ ಹೊಸ ವರ್ಷಾಚರಣೆ ಕುರಿತು ಚರ್ಚಿಸಿ, ಕೇಕ್ ಕತ್ತಿರಿಸಿ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು.ಕೆಲವು ಕಾಲೇಜುಗಳಲ್ಲಿ ಯುವಕರು, ತಮ್ಮ ಗೆಳತಿಯರಿಗಾಗಿ ಕಾದಿದ್ದು, ಅವರಿಗೆ ಶುಭಾಶಯ ಹೇಳಿದರು. ನಗರದ ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಎಸ್.ಡಿ.ಎಂ ಕಾಲೇಜು, ಜೆಎಸ್ಎಸ್ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು, ಮಹಾಜನ ಕಾಲೇಜು, ಮರಿಮಲ್ಲಪ್ಪ ಕಾಲೇಜು, ಟಿಟಿಎಲ್, ಟೆರೇಷಿಯನ್, ವಿದ್ಯಾವರ್ಧಕ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರಿ ತಮ್ಮ ಪಾಡಿಗೆ ತಾವು ಕೇಕ್ ಕತ್ತರಿಸಿ ಸಂಭ್ರಮಿಸಿದರು.ಹೊಸ ವರ್ಷದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಸಿಹಿ ತಿನಿಸು, ಕೇಕ್ ಗಳ ಮಾರಾಟ ಭರ್ಜರಿಯಾಗಿತ್ತು. ಅತ್ಯಧಿಕ ಸಂಖ್ಯೆಯಲ್ಲಿ ಮದ್ಯ ಮತ್ತು ಕೇಕ್ ಮಾರಾಟವಾಯಿತು. ಕೆಲವು ಹೋಟೆಲ್ ಗಳಲ್ಲಿ ಸಾಕಷ್ಟು ಮಂದಿ ಒಟ್ಟಿಗೆ ಸೇರಿ ಔತಣಕೂಟ ಆಯೋಜಿಸಿ ಸಂಭ್ರಮಿಸಿದರು.ಸಣ್ಣ ಸಣ್ಣ ಹೋಟೆಲ್, ಪಬ್ ಗಳಲ್ಲಿ ಯುವಕ- ಯುವತಿಯರು ಸೇರಿ ಕಾಲ ಕಳೆದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ