ಉತ್ತಮ ಚಿಂತೆಗಳಿಂದ ನೆಮ್ಮದಿ ಬದುಕು ಸಾಧ್ಯ-ಬಸವಾನಂದ ಸ್ವಾಮೀಜಿ

KannadaprabhaNewsNetwork | Published : Jun 15, 2024 1:02 AM

ಸಾರಾಂಶ

ಪ್ರಳಯದ ಚಿಂತೆ ಮಾಡುವವರು ಒಳ್ಳೆಯ ಬದುಕಿನ ಚಿಂತನೆಗೆ ಮುಂದಾದರೆ ಮನುಕುಲವೇ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಮನಗುಂಡಿ ಬಸವಾಶ್ರಮದ ಬಸವಾನಂದ ಮಹಾಸ್ವಾಮಿಗಳು ನುಡಿದರು.

ಹಾನಗಲ್ಲ: ಪ್ರಳಯದ ಚಿಂತೆ ಮಾಡುವವರು ಒಳ್ಳೆಯ ಬದುಕಿನ ಚಿಂತನೆಗೆ ಮುಂದಾದರೆ ಮನುಕುಲವೇ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಮನಗುಂಡಿ ಬಸವಾಶ್ರಮದ ಬಸವಾನಂದ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ತಾಲೂಕಿನ ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದಲ್ಲಿ ಶಿವಬಸವ ಮಹಾಸ್ವಾಮಿಗಳವರ ಮೌನಾನುಷ್ಠಾನ ಮಂಗಲ, ಚನ್ನವೀರ ಮಹಾಸ್ವಾಮಿಗಳ ಸ್ಮರಣೋತ್ಸವ, ಸ್ನೇಹ ಮೈತ್ರಿ ಬ್ಲಡ್ ಆರ್ಮಿಯ ೧೫೦ ನೇ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಬೇಕಾದ ಕಾಲದಲ್ಲಿ ನಾವಿದ್ದೇವೆ. ಜನಕಲ್ಯಾಣದ ಚಿಂತನೆ ಬೇಕಾಗಿದೆ. ಕಲುಷಿತ ನೀರು ಕುಡಿಯುತ್ತಿದ್ದೇವೆ. ಮಳೆ ನೀರನ್ನು ಸಮುದ್ರಕ್ಕೆ ಅಟ್ಟುತ್ತಿದ್ದೇವೆ. ಅದನ್ನು ಸಂಗ್ರಹಿಸಿಟ್ಟುಕೊಳ್ಳುವತ್ತ ನಮ್ಮ ಚಿತ್ತವಿಲ್ಲ. ಬಂಗಾರವಿಲ್ಲದೆ ಬದುಕಬಹುದು ನೀರಿಲ್ಲದೆ ಬದುಕು ಸಾಧ್ಯವಿಲ್ಲ. ಸರಳ ಸಾಮಾಜಿಕ ಜೀವನದಿಂದ ದೂರವಾಗುತ್ತಿದ್ದೇವೆ. ಆಡಂಬರದಲ್ಲಿ ನಮ್ಮನ್ನು ಕಳೆದುಕೊಳ್ಳುತ್ತಿದ್ದೇವೆ. ರಕ್ತದಾನ ಪರಮ ಪವಿತ್ರವಾದುದು. ಇಂದು ೧೦೨ ನೇ ಬಾರಿಗೆ ರಕ್ತ ದಾನ ಮಾಡಿದ್ದೇನೆ. ರಕ್ತ ದಾನ ಆಧುನಿಕ ಕಾಲದ ಬಹು ದೊಡ್ಡ ಅಗತ್ಯ ಎಂದರು.ಶಿವಯೋಗ ಮಂದಿರಲ್ಲಿ ೧೫ ದಿನಗಳ ಮೌನಾನುಷ್ಠಾ ಪೂರೈಸಿ ಅಕ್ಕಿಆಲೂರಿಗೆ ಆಗಮಿಸಿದ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ಶಿಯೋಗ ಮಂದಿರ ತಪಶ್ಚಕ್ತಿಯ ದಿವ್ಯ ಸ್ಥಾನ. ಅಲ್ಲಿ ಮೌನಾನಷ್ಠಾನ ಮಾಡುವುದೇ ಒಂದು ದೊಡ್ಡ ಶಕ್ತಿ ಸಾಧನೆ. ಸಂಸ್ಕಾರ ರಹಿತವಾಗುತ್ತಿರುವ ಈ ಸಮಾಜದಲ್ಲಿ ಮಕ್ಕಳಾದಿಯಾಗಿ ಎಲ್ಲರಿಗೂ ಸಂಸ್ಕಾರ ನೀಡುವ ಅಗತ್ಯವಿದೆ. ಲಿಂಗಧಾರಣೆ ರುದ್ರಾಕ್ಷಿ ಧಾರಣೆಯ ಶಕ್ತಿಯ ಅರಿವು ಮೂಡಿಬೇಕಾಗಿದೆ. ಬರುವ ಶ್ರಾವಣ ಮಾಸದಲ್ಲಿ ಅಕ್ಕಿಆಲೂರಿನಲ್ಲಿ ಮುತ್ತಿನಕಂತಿಮಠದ ಸಹಯೋಗದಲ್ಲಿ ಪ್ರತಿ ಮನೆಗಳಿಗೆ ತೆರಳಿ ಶಿವಲಿಂಗ ಹಾಗೂ ರುದ್ರಾಕ್ಷಿಗಳನ್ನು ಕಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಚಾರವಂತಿಕೆ ಬೇಕಾಗಿದೆ. ಧರ್ಮಾಪಚಾರ ಸಲ್ಲದು. ಧರ್ಮವಂತರಾಗೋಣ ಎಂದರು.ಆಶಯ ಮಾತುಗಳನ್ನಾಡಿದ ಸ್ನೇಹ ಮೈತ್ರಿ ಬ್ಲಡ್ ಆರ್ಮಿಯ ರಕ್ತ ಸೈನಿಕ ಕರಸಬಸಪ್ಪ ಗೊಂದಿ, ಅಕ್ಕಿಆಲೂರು ರಕ್ತ ದಾನಿಗಳ ತವರೂರು ಎಂಬ ಖ್ಯಾತಿ ಪಡೆದಿರುವುದಲ್ಲದೆ ಬಹುಸಂಖ್ಯೆಯ ರೋಗಿಗಳಿಗೆ ರಕ್ತ ನೀಡಿದ ಹೆಮ್ಮೆ ಇಲ್ಲಿದೆ. ಇಡೀ ರಾಜ್ಯದಲ್ಲಿಯೇ ರಕ್ತದಾನಕ್ಕೆ ಹೆಸರಾಗಿದೆ. ಇದು ಈ ನಾಡಿನ ಹೆಮ್ಮೆ. ಇದಕ್ಕೆಲ್ಲ ಸಂಘ ಸಂಸ್ಥೆಗಳು, ಸಾರ್ವಜನಿಕರು ಸತತ ಸಹಕಾರ ನೀಡುತ್ತಲೇ ಇದ್ದಾರೆ ಎಂದರು.ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ಕೂಡಲದ ಗುರುನಂಜೇಶ್ವರಮಠದ ಗುರುಮಹೇಶ್ವರ ಮಹಾಸ್ವಾಮಿಗಳು, ಗುಬ್ಬಿ ನಂಜುಂಡೇಶ್ವರ ಶ್ರೀಗಳು ಸಮ್ಮುಖವಹಿಸಿದ್ದರು.ಹಂಸಭಾವಿಯ ರಾಜು ತಿಳವಳ್ಳಿ ೬೪ ಬಾರಿ, ಧಾರವಾಡದ ಚಂದ್ರಶೇಖರ ರಾಯರ ೨೧೦, ಭೀಮಾಶಂಕರ ಮಾಡಿಗ್ಯಾಳ ೨೨, ಕೂಡಲದ ಗುರುನಂಜೇಶ್ವರ ಶಿವಾಚಾರ್ಯರು ೧೫ ನೇ ಬಾರಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಸ್ವಾಮಿಜಿ ೧೧ ಬಾರಿ ಸೇರಿದಂತೆ ೬೫ ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.

Share this article