ಸಂಗೀತ, ಸಾಹಿತ್ಯದಿಂದ ನೆಮ್ಮದಿ ಜೀವನ

KannadaprabhaNewsNetwork |  
Published : Jul 09, 2025, 12:26 AM IST
08 ಜೆ.ಜಿ.ಎಲ್ .ಚಿತ್ರ 1: ಜಗಳೂರು ತಾಲ್ಲೂಕಿನ ಬೆಂಚಿಕಟ್ಟೆ ಗ್ರಾಮದಲ್ಲಿ ಹಿಂದೂಸ್ತಾನಿ  ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿದರು. ಶಾಸಕ ಬಿ. ದೇವೇಂದ್ರಪ್ಪ, ವಿನಯ್ , ದ್ಯಾಮಪ್ಪ ಕುಮಾರ್ ಭಾಗವಹಿಸಿದ್ದರು | Kannada Prabha

ಸಾರಾಂಶ

ಸಮಾಜದಲ್ಲಿ ಯಾರಿಗೂ ಕೇಡು ಬಯಸದೇ, ವಂಚನೆ ಎಸಗದೇ ಸಹಜ ಮತ್ತು ಸರಳ ಬದುಕು ನಡೆಸಿದಲ್ಲಿ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದಿದ್ದಾರೆ.

- ಪುಟ್ಟರಾಜ ಗವಾಯಿ ಪುಣ್ಯಸ್ಮರಣೆಯಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀ

- - -

ಕನ್ನಡಪ್ರಭ ವಾರ್ತೆ ಜಗಳೂರು

ಸಮಾಜದಲ್ಲಿ ಯಾರಿಗೂ ಕೇಡು ಬಯಸದೇ, ವಂಚನೆ ಎಸಗದೇ ಸಹಜ ಮತ್ತು ಸರಳ ಬದುಕು ನಡೆಸಿದಲ್ಲಿ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.

ತಾಲೂಕಿನ ಬೆಂಚಿಕಟ್ಟೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿದ್ಧಾರೂಢ ಭಜನಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 26ನೇ ವರ್ಷದ ಪೂಜಾ ಕಾರ್ಯಕ್ರಮ ಮತ್ತು ಪುಟ್ಟರಾಜ ಗವಾಯಿ ಗುರುಗಳ ಪುಣ್ಯಸ್ಮರಣೆ ಕಾರ್ಯಕ್ರಮ ಅಂಗವಾಗಿ ಖ್ಯಾತ ಹಿಂದೂಸ್ತಾನಿ ಗಾಯಕ ಹುಮಾಯೂನ್ ಹರ್ಲಾಪುರ ಮತ್ತು ಶ್ರೀಪಾದ ದಾಸ್ ಅವರ ಸಂಗೀತ ಕಚೇರಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವೇದ, ಪುರಾಣ ಹಗೂ ಪ್ರಾಚೀನ ಸಾಹಿತ್ಯ, ವಚನಗಳಲ್ಲಿ ಸಂಗೀತದ ಮಹತ್ವದ ಬಗ್ಗೆ ವಿಶೇಷ ಉಲ್ಲೇಖ ಇದೆ. ಮನುಷ್ಯನಿಗೆ ಸಂಗೀತ, ಸಾಹಿತ್ಯ, ಕಲೆಗಳು ಜೀವನೋತ್ಸಾಹ ಹೆಚ್ಚಿಸುತ್ತವೆ. ವೇದಪ್ರಿಯ, ನಾದಪ್ರಿಯ ಶಿವನಿಗೂ ಸಂಗೀತಕ್ಕೂ ಅವಿನಾಭಾವದ ನಂಟು ಇದೆ. ಇಂತಹ ಕುಗ್ರಾಮದಲ್ಲೂ ಶಾಸ್ತ್ರೀಯ ಸಂಗೀತದ ಪರಂಪರೆ ಉಳಿಸುವ ಕಾರ್ಯ ಜರುಗುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.

ದುಶ್ಚಟಗಳಿಗೆ ದಾಸರಾಗಬೇಡಿ:

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಶೋಷಿತ ಸಮುದಾಯಗಳ ಜನರು ದುಶ್ಚಟಗಳಿಗೆ ದಾಸರಾಗದೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಂಗೀತ ಆರೋಗ್ಯಕರ ಮನಸ್ಸುಗಳಿಗೆ ಪುಷ್ಟಿ ನೀಡುತ್ತದೆ. ಪ್ರತಿಯೊಬ್ಬ ಪ್ರತಿಭಾವಂತರಿಗೂ ಹುಚ್ಚು ಆವರಿಸುವುದು ಸಾಮಾನ್ಯ. ಹುಮಾಯೂನ್ ಹರ್ಲಾಪುರ್ ಅವರು ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ 4500ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಕೂಲಿ ಕಾರ್ಮಿಕರೇ ವಾಸಿಸುವ ಈ ಪುಟ್ಟ ಗ್ರಾಮದಲ್ಲಿ ಪ್ರತಿವರ್ಷ ಶಾಸ್ತ್ರೀಯ ಸಂಗೀತ ಕಚೇರಿ ಜರುಗುತ್ತದೆ ಎನ್ನುವುದೇ ಆಶ್ಚರ್ಯದ ಸಂಗತಿ ಎಂದರು.

ಹಿರಿಯ ಪತ್ರಕರ್ತ, ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ಶ್ರಮಿಕ ಸಮುದಾಯಗಳಿಗೂ ಸಂಗೀತಕ್ಕೂ ಆದಿ ಕಾಲದ ನಂಟಿದೆ. ನಿತ್ಯದ ಕಾಯಕದಲ್ಲಿ ಹಾಡು, ಹಸೆಯ ಮೂಲಕ ಸತ್ವಭರಿತ ಜಾನಪದ ಸಾಹಿತ್ಯ ರೂಪುಗೊಂಡಿದ್ದೇ ಗ್ರಾಮೀಣ ಪರಿಸರದಲ್ಲಿ ಎಂದು ಹೇಳಿದರು.

ಇನ್ ಸೈಟ್ ಸಂಸ್ಥೆ ಮುಖ್ಯಸ್ಥ ಜಿ.ಬಿ. ವಿನಯ್ ಕುಮಾರ್, ಸಿಂಡಿಕೇಟ್ ಸದಸ್ಯ ದ್ಯಾಮಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ, ಎನ್.ಎಸ್.ರಾಜು, ಬಿ.ಮಹೇಶ್ವರಪ್ಪ, ಕೃಷ್ಣಮೂರ್ತಿ ಕಿಲಾರಿ, ಆಯೋಜಕ ಬೆಂಚಿಕಟ್ಟೆ ಅಂಜಿನಪ್ಪ, ದ್ಯಾಮೇಶ್, ಗೋವಿಂದ ಇತರರು ಇದ್ದರು.

- - -

-08ಜೆಜಿಎಲ್.ಚಿತ್ರ1:

ಕಾರ್ಯಕ್ರಮದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿನಯ್, ದ್ಯಾಮಪ್ಪ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

PREV