ಕೊಪ್ಪ: ಮೊರಾರ್ಜಿ ವಸತಿ ಶಾಲೆಯಲ್ಲಿ ಕೂಡಲೇ ಸಿಸಿಟಿವಿ ಅಳವಡಿಸಬೇಕು ಶೌಚಾಲಯ ಬದಲಾಯಿಸಬೇಕು ಎಂದು ಪೋಷಕರು ಒತ್ತಾಯಿಸಿದರು.
ಮೊರಾರ್ಜಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಶಮಿತಾ ಸಾವಿನ ಕುರಿತು ಪೋಷಕರ ಅನಿಸಿಕೆ ಸಂಗ್ರಹಿಸಲು ವಿದ್ಯಾರ್ಥಿ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಶಾಸಕ ಟಿ.ಡಿ. ರಾಜೇಗೌಡರ ಅಧ್ಯಕ್ಷತೆಯಲ್ಲಿ ವಸತಿ ಶಾಲೆಯ ಕಚೇರಿಯಲ್ಲಿ ನಡೆದ ಪೋಷಕರ ಸಭೆಯಲ್ಲಿ ೯ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ಸಮಯದಲ್ಲಿ ಸಿಬ್ಬಂದಿ ಕರೆ ಸ್ವೀಕರಿಸದೆ, ಸಾವಿನ ಸಮಯ ನಿಖರವಾಗಿ ತಿಳಿಸದೆ ಇರುವುದು, ಅಧಿಕಾರಿಗಳಿಗೆ ರಾತ್ರಿಯೇ ಸಾವಿನ ವಿಚಾರ ತಿಳಿದರೂ ಪೋಷಕರಿಗೆ ಬೆಳಿಗ್ಗೆವರೆಗೆ ವಿಚಾರ ತಿಳಿಸದೆ ಇದ್ದ ಕಾರಣ ಸೇರಿದಂತೆ ವಿದ್ಯಾರ್ಥಿನಿ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತಪಡಿಸಿದರು.೨೦೨೩ರಲ್ಲೂ ಇದೇ ಶಾಲೆ ವಿದ್ಯಾರ್ಥಿನಿ ಸಾವನ್ನಪ್ಪಿದ ಸಂದರ್ಭದಲ್ಲಿ ಕಾರಿಡಾರ್‌ನಲ್ಲಿ ಸಿಸಿಟಿವಿ ಇರಲಿಲ್ಲ. ಪ್ರಾಂಶುಪಾಲೆ ಮತ್ತು ವಾರ್ಡನ್‌ನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಪೋಷಕರು ತಿಳಿಸಿದರು. ಉಪಕಂದಾಯ ಅಧಿಕಾರಿ ಸುದರ್ಶನ್ ಮಾಹಿತಿ ನೀಡಿ ಸಿಸಿ ಕ್ಯಾಮರಾವನ್ನು ಕಾರಿಡಾರ್ ಮತ್ತು ಅಗತ್ಯವಿರುವಲ್ಲಿ ಅಳವಡಿಸಲು ಸೂಚನೆ ನೀಡಿದ್ದೇವೆ. ತನಿಖೆ ಪ್ರಗತಿಯಲ್ಲಿದ್ದು ವರದಿ ಬಂದ ಕೂಡಲೇ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ರೀತಿ ಕ್ರಮ ವಹಿಸಲಾಗುತ್ತದೆ ಎಂದರು. ಶಾಸಕ ರಾಜೇಗೌಡ ಮಾತನಾಡಿ ವರದಿ ಬರುವವರೆಗೂ ಇದು ಆತ್ಮಹತ್ಯೆಯೋ ಕೊಲೆಯೋ ಅಸಹಜ ಸಾವೋ ಯಾವುದನ್ನು ಯಾರೂ ದೃಢಪಡಿಸುವಂತಿಲ್ಲ. ಈಗಾಗಲೇ ವಸತಿ ಶಾಲೆ ಸುಣ್ಣಬಣ್ಣಗಳಿಗೆ ಹಾಗೂ ದುರಸ್ತಿ ಕಾರ್ಯಕ್ಕೆ ಹಣ ಮಂಜೂರು ಮಾಡಲಾಗಿದೆ. ಕಾಮಗಾರಿ ಆರಂಭವಾಗಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಆಡಳಿತ ಸಿಬ್ಬಂದಿ ಅಥವಾ ನನ್ನಲ್ಲಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು. ತನಿಖೆ ಪ್ರಾಮಾಣಿಕ ವಾಗಿ ನಡೆಯಬೇಕೆನ್ನುವ ಕಾರಣಕ್ಕಾಗಿಯೇ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಮೃತ ವಿದ್ಯಾರ್ಥಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಡಿವೈಎಸ್.ಪಿ. ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಇರಬೇಕು. ಆ ಸಮಿತಿ ಮುಖೇನ ಸಭೆ ನಡೆಯುತ್ತಿರಬೇಕು. ಇದೆಲ್ಲವೂ ಈ ವಸತಿ ಶಾಲೆಯಲ್ಲಿ ಚಾಲ್ತಿಯಲ್ಲಿದೆಯೇ ಎಂಬುದನ್ನು ಗಮನಹರಿಸಬೇಕು. ಚಾಲ್ತಿಯಲ್ಲಿ ಇಲ್ಲದೆ ಇದ್ದರೆ ವಸತಿ ಶಾಲೆ ಆಡಳಿತ ಮಂಡಳಿಯೇ ನೇರ ಹೊಣೆ. ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕರ ಸಭೆಯನ್ನು ಆಗಾಗ್ಗೆ ಕರೆಯುವುದು ಕಡ್ಡಾಯ. ಮಕ್ಕಳ ಕೌನ್ಸಿಲಿಂಗ್ ಮಾಡಿ ಆತ್ಮಸ್ಥೈರ್ಯ ತುಂಬುವ ಕೆಲಸ ವಾಗಬೇಕು ಎಂದರು.