ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

KannadaprabhaNewsNetwork | Published : May 11, 2024 1:30 AM

ಸಾರಾಂಶ

ಬಸವೇಶ್ವರ ಜಯಂತಿ ಅಂಗವಾಗಿ ಮಜ್ಜಿಗುಡ್ಡದಲ್ಲಿ ರಥೋತ್ಸವ ನಡೆಯುತ್ತದೆ. ಈ ವೇಳೆ ಭಕ್ತಾಧಿಗಳ ಸಂಖ್ಯೆ ಅಪಾರವಾಗಿತ್ತು. ಅತ್ತ ರಥವೂ ಸಾಗುತ್ತಿತ್ತು. ಇತ್ತ ಜನಜಂಗುಳಿಯೂ ವಿಪರೀತವಾಗಿ ತಳ್ಳಾಟ, ನೂಕಾಟ ಎಲ್ಲವೂ ನಡೆದಿತ್ತು. ಈ ತಳ್ಳಾಟದಿಂದಾಗಿ ಮಹಮ್ಮದಸಾಬ ಆಯತಪ್ಪಿ ರಥದ ಚಕ್ರಕ್ಕೆ ಸಿಲುಕಿದ. ಇದರಿಂದ ಸ್ಥಳದಲ್ಲೇ ಮೃತಪಟ್ಟ.

ಕನ್ನಡಪ್ರಭ ವಾರ್ತೆ ಅಣ್ಣಿಗೇರಿ

ಬಸವ ಜಯಂತಿ ಅಂಗವಾಗಿ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ನಡೆದಿದೆ. ಮಹಮ್ಮದಸಾಬ ಹಸನಸಾಬ ಮೊಕಾಶಿ (60) ಎಂಬಾತನೇ ಮೃತಪಟ್ಟ ವ್ಯಕ್ತಿ. ಬಸವೇಶ್ವರ ಜಯಂತಿ ಅಂಗವಾಗಿ ಮಜ್ಜಿಗುಡ್ಡದಲ್ಲಿ ರಥೋತ್ಸವ ನಡೆಯುತ್ತದೆ. ಈ ವೇಳೆ ಭಕ್ತಾಧಿಗಳ ಸಂಖ್ಯೆ ಅಪಾರವಾಗಿತ್ತು. ಅತ್ತ ರಥವೂ ಸಾಗುತ್ತಿತ್ತು. ಇತ್ತ ಜನಜಂಗುಳಿಯೂ ವಿಪರೀತವಾಗಿ ತಳ್ಳಾಟ, ನೂಕಾಟ ಎಲ್ಲವೂ ನಡೆದಿತ್ತು. ಈ ತಳ್ಳಾಟದಿಂದಾಗಿ ಮಹಮ್ಮದಸಾಬ ಆಯತಪ್ಪಿ ರಥದ ಚಕ್ರಕ್ಕೆ ಸಿಲುಕಿದ. ಇದರಿಂದ ಸ್ಥಳದಲ್ಲೇ ಮೃತಪಟ್ಟ. ಇದರಿಂದಾಗಿ, ರಥೋತ್ಸವ ಅರ್ಧಕ್ಕೆ ನಿಂತಿತು. ಮೃತದೇಹವನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಜಾತ್ರೆಯಲ್ಲಿ ಈ ಘಟನೆ ನಡೆದಿರುವುದು ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ.

ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹6.39 ಲಕ್ಷ ವಂಚನೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬ್ಯಾಂಕ್ ಖಾತೆದಾರರ ಗಮನಕ್ಕೆ ಬಾರದಂತೆ ವಿವಿಧ ಬ್ಯಾಂಕ್ ಖಾತೆಯಿಂದ ₹6.39 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡದ ಮಿಚಿಗನ್ ಲೇಔಟ್‌ನ ಮಹಾಂತೇಶ ಕುಂದರಗಿ ವಂಚನೆಗೊಳಗಾದವರು. ಮೊಬೈಲ್ ನಂಬರ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ಕಂಪನಿ ಅವರಿಗೆ ವಿಚಾರಿಸಿದಾಗ ನೆಟ್‌ವರ್ಕ್ ಸಮಸ್ಯೆ ಇರಬಹುದು ಎಂದು ಬೇರೊಂದು ಸಿಮ್ ಕಾರ್ಡ್ ಕೊಟ್ಟಿದ್ದಾರೆ. ಆ ಸಿಮ್ ಕಾರ್ಡ್ ಹಾಕಿದ ನಂತರದಲ್ಲಿ ಮೊಬೈಲ್ ಆ್ಯಕ್ಟಿವೇಟ್ ಆಗಿದ್ದಲ್ಲದೇ, ಕರೆಗಳು ಸೌಲಭ್ಯ ಚಾಲ್ತಿಯಾಗಿತ್ತು. ಆದರೆ, ಎಸ್‌ಎಂಎಸ್ ಸೌಲಭ್ಯ 24 ಗಂಟೆಗಳ ನಂತರ ದೊರೆಯುತ್ತದೆ ಎಂದು ಹೇಳಿದ್ದರು. ಅದರಂತೆ ಮುಂದಿನ 24 ಗಂಟೆಯ ಅವಧಿಯಲ್ಲಿ ವಂಚಕರು ವಿವಿಧ ಬ್ಯಾಂಕ್ ಖಾತೆಯಲ್ಲಿನ ₹6,39,521ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಲಾಗಿದೆ.

₹1.68 ಲಕ್ಷ ವಂಚನೆ

ಹುಬ್ಬಳ್ಳಿ: ಕಳೆದುಹೋದ ಮೊಬೈಲ್‌ನ್ನು ಅಪರಿಚಿತರು ಅಕ್ರಮವಾಗಿ ಬಳಸಿಕೊಂಡು ₹1.68 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ರಾಜನಗರದ ಶ್ರೀಹರ್ಷ ಸತ್ತಿಗೇರಿ ಎಂಬುವರ ವಂಚನೆಗೊಳಗಾದವರು. ಮನೆಯಿಂದ ಮಾರ್ಕೆಟ್‌ಗೆ ಹೋಗಿ ಬರುವ ಮಾರ್ಗ ಮಧ್ಯದಲ್ಲಿ ಮೊಬೈಲ್ ಕಳೆದುಕೊಂಡಿದ್ದರು. ಈ ಮೊಬೈಲ್ ಸಿಕ್ಕ ಅಪರಿಚಿತರು ಅದರಲ್ಲಿದ್ದ ಫೋನ್‌ಪೇಯನ್ನು ಅಕ್ರಮವಾಗಿ ಬಳಸಿಕೊಂಡು ಬೇರೆ ಬೇರೆ ಕಡೆ ಬ್ಯಾಂಕ್ ಖಾತೆಗೆಳಿಗೆ ಒಟ್ಟು ₹1,68,901 ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ಬ್ಯಾಗ್ ಕಳ್ಳತನ

ಹುಬ್ಬಳ್ಳಿ: ರೈಲಿನಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ₹30,300 ವೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮಹಾದೇವಿ ಕಾಟಾಪುರ ಎಂಬುವರ ಬ್ಯಾಗ್ ಕಳ್ಳತನವಾಗಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಲೆ ಬುಡದಲ್ಲಿ ಇಟ್ಟುಕೊಂಡು ಮಲಗಿದ್ದ ಬ್ಯಾಗ್‌ನಲ್ಲಿದ್ದ ನಗದು ಮತ್ತು 5 ಗ್ರಾಂ. ತೂಕದ ಕಿವಿಯೋಲೆ ಸೇರಿ ಇತರೆ ಸಾಮಗ್ರಿ ಕಳ್ಳತನವಾಗಿದೆ ಎಂದು ದೂರಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article