ಊರಾಚೆ ಅನಾಥವಾಗಿ ವಾಸವಿದ್ದ ವ್ಯಕ್ತಿ ಆರೋಗ್ಯ ವಿಚಾರಣೆ: ಕನ್ನಡಪ್ರಭ ವರದಿ ಪರಿಣಾಮ

KannadaprabhaNewsNetwork |  
Published : May 23, 2024, 01:01 AM IST
ಫೋಟೋ 22ಪಿವಿಡಿ2ಪಾವಗಡ,ವ್ಯಕ್ತಿಯೊಬ್ಬರನ್ನು ಊರಾಚೆ ಬಟ್ಟೆ ಗುಡಾರದಲ್ಲಿ ಇರಿಸಿದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ತಾ,ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳ ತಂಡ ಪಟ್ಟಣದ ಬನಶಂಕರಿ ಬಡಾವಣೆಗೆ ತೆರಳಿ ರೋಗಿಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.ಫೋಟೋ 22ಪಿವಿಡಿ3ಊರಾಚೆ ತಳ್ಳಿದ್ದ ರೋಗಿ ಕುರಿತು ಆತನ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ ನಿಲಯಪಾಲಕ ರಾಜ್‌ಕುಮಾರ್‌ ಹಾಗೂ ಪುರಸಭೆಯ ನಿರೀಕ್ಷಕ ನಂದೀಶ್‌,ಸಹಾಯಕ ಹರೀಶ್‌ಬಾಬು       | Kannada Prabha

ಸಾರಾಂಶ

ಪಟ್ಟಣದ ಬನಶಂಕರಿ ಬಡಾವಣೆಯ ಬಟ್ಟೆ ಗುಡಾರವೊಂದರಲ್ಲಿ ಅನಾಥವಾಗಿ ವಾಸವಿದ್ದ ರೋಗಪೀಡಿತ ವ್ಯಕ್ತಿಯನ್ನು ಬುಧವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪಟ್ಟಣದ ಬನಶಂಕರಿ ಬಡಾವಣೆಯ ಬಟ್ಟೆ ಗುಡಾರವೊಂದರಲ್ಲಿ ಅನಾಥವಾಗಿ ವಾಸವಿದ್ದ ರೋಗಪೀಡಿತ ವ್ಯಕ್ತಿಯನ್ನು ಬುಧವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದರು.ಇಲ್ಲಿನ ರೊಪ್ಪ ಗ್ರಾಮದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಲವು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದ ಕಾರಣ ಆಸ್ಪತ್ರೆಯಿಂದ ಗ್ರಾಮಕ್ಕೆ ವಾಪಸ್ಸಾಗಿ ಹಾಸಿಗೆ ಹಿಡಿದಿದ್ದರು. ರೋಗ ಹೆಚ್ಚು ಉಲ್ಬಣವಾಗುತ್ತಿರುವ ಕಾರಣ ಊರಾಚೆ ಬನಶಂಕರಿ ಬಡಾವಣೆಯ ಮೈದಾನವೊಂದರಲ್ಲಿ ಬಟ್ಟೆ ಗುಡಾರ ಹಾಕಿ ವಾಸವಾಗಿದ್ದರು.

ಮಳೆ, ಗಾಳಿ ಹಾಗೂ ಸಮಯಕ್ಕೆ ಕುಡಿವ ನೀರು ಹಾಗೂ ಅನ್ನ ಆಹಾರ ಸಿಗದೇ ಪರದಾಡುತ್ತಿದ್ದರು. ಸಾರ್ವಜನಿಕ ದೂರಿನ ಮೇರೆಗೆ ರೋಗಪೀಡಿತ ಈ ವ್ಯಕ್ತಿ ಅನಾಥವಾಗಿ ಬಟ್ಟೆ ಗುಡಾರದಲ್ಲಿ ವಾಸ ಮತ್ತು ನೋವು ಹಾಗೂ ಆಹಾರಕ್ಕಾಗಿ ಪರದಾಡುವ ಸ್ಥಿತಿ ಕುರಿತು ಮೇ 21ರಂದು "ಅನಾರೋಗ್ಯ ಊರಾಚೆ ತಳ್ಳಿದ ಪೋಷಕರು " ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ವರದಿ ಪ್ರಕಟ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಹಾಗೂ ನಿಲಯಪಾಲಕ ರಾಜ್‌ಕುಮಾರ್‌, ಪುರಸಭೆಯ ಕಂದಾಯ ನಿರೀಕ್ಷಕ ನಂದೀಶ್‌, ಸಹಾಯಕ ಅಧಿಕಾರಿ ಹರೀಶ್‌ ಬಾಬು ತಂಡ ಬನಶಂಕರಿ ಬಡಾವಣೆಗೆ ಭೇಟಿ ನೀಡಿ ಅನಾಥವಾಗಿ ಬಟ್ಟೆ ಗುಡಾರದಲ್ಲಿ ವಾಸವಿದ್ದ ರೋಗಿಯ ಆರೋಗ್ಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಈ ಕುರಿತು ಸಮಾಜ ಕಲ್ಯಾಣ ಇಲಾಖೆ ನಿಲಯಪಾಲಕ ರಾಜ್‌ಕುಮಾರ್‌ ಮಾತನಾಡಿ, ಬಟ್ಟೆ ಗುಡಾರದಲ್ಲಿ ವಾಸವಿದ್ದ ರೋಗಿಯ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಲ್ಲಿ ವಾಸವಿದ್ದ ವ್ಯಕ್ತಿಗೆ ಕಳೆದ ಅನೇಕ ದಿನಗಳಿಂದ ರೋಗ ಕಾಣಿಸಿಕೊಂಡಿದೆ. ಸಂಬಂಧಿಕರು ಬೆಂಗಳೂರು, ತುಮಕೂರಿನ ಆಸ್ಪತ್ರೆಗೆ ತೆರಳಿ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರೋಗ ಗುಣವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದೇನು ಸೋಂಕು ಹರಡುವ ರೋಗವಲ್ಲ ಎಂಬ ಬಗ್ಗೆ ಸಂಬಂಧಿಕರಿಂದ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.

ರೋಗಿಯ ಸ್ಥಿತಿ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದ್ಯೊಯಬೇಕಿದೆ. ಆ ವ್ಯಕ್ತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡರೆ ವಾರ್ಡಿನಲ್ಲಿ ದಾಖಲಾದ ರೋಗಿಗಳು ಭಯಾಭೀತರಾಗುವ ಸಾಧ್ಯತೆ ಇದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತಿರುಪತಯ್ಯ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ನಿರ್ಗತಿಕರ ಅಶ್ರಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದ್ದು, ಇದಕ್ಕೆ ಪುರಸಭೆ ಮತ್ತು ಸರ್ಕಾರಿ ಆಸ್ಪತ್ರೆಯ ಸಹಕಾರ ಅಗತ್ಯವಿದೆ. ಗುರುವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸದ್ಯ ರೋಗಿಯ ಸ್ಥಿತಿಗತಿ ಬಗ್ಗೆ ಹಾಗೂ ಅವರ ತಾಯಿಯ ಹೇಳಿಕೆ ಕುರಿತು ಮಾಹಿತಿ ಸಂಗ್ರಹಿಸಲಾಗಿದ್ದು, ಈ ಬಗ್ಗೆ ದಾಖಲೆ ಸಮೇತ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಗ್ರೆಡ್‌ 1 ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯಗೆ ವರದಿ ಸಲ್ಲಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮುದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್‌ಕುಮಾರ್‌ ತಿಳಿಸಿದ್ದಾರೆ.

ತಾಲೂಕು ಸಮಾಜ ಕಲ್ಯಾಣ ಇಲಾಖೆ ನಿಲಯಪಾಲಕ ರಾಜ್‌ಕುಮಾರ್‌ ಹಾಗೂ ಪುರಸಭೆಯ ನಿರೀಕ್ಷಕ ನಂದೀಶ್‌, ಸಹಾಯಕ ಹರೀಶ್‌ಬಾಬು ಭೇಟಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ