ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಸರ್ವರ ಹೃದಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಏಕೈಕ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ, ಬಸವ ವಚನ ಪಠಣದಿಂದ ವ್ಯಕ್ತಿಯ ಉದ್ವೇಗ ಮತ್ತು ಇತರೆ ಚಿಂತೆಗಳು ದೂರವಾಗುತ್ತವೆ ಎಂದು ಹಾರಕೂಡ ಮಠದ ಡಾ.ಚೆನ್ನವೀರ ಶಿವಾಚಾರ್ಯರು ನುಡಿದರು.ಅವರು ಪಟ್ಟಣದ ಎಂಎಂ ಬೇಗ್ ಸಭಾಂಗಣದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಸಮಾಜ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದಿಂದ ಆಯೋಜಿಸಿದ್ದ ಮೂರನೇ ಸ್ವಾಭಿಮಾನಿ ಕಲ್ಯಾಣ ಪರ್ವ ಉದ್ಘಾಟಿಸಿ ಮಾತನಾಡಿ, ಜನರ ಹೃದಯ ಬೆಳಗುವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಪ್ರತಿದಿನ ಕನಿಷ್ಠ ಐದು ವಚನಗಳನ್ನು ಪಠಿಸಬೇಕು. ಪೂಜ್ಯ ಡಾ.ಚನ್ನಬಸವಾನಂದ ಸ್ವಾಮೀಜಿಗಳು ದೇಶ ವಿದೇಶಗಳಲ್ಲಿ ಬಸವ ತತ್ವದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ವಚನ ಸಾಹಿತ್ಯದ ಪ್ರಚಾರಗೈಯುತ್ತಿದ್ದಾರೆ. ಅವರ ಕಾರ್ಯಕ್ಕೆ ಸದಾ ನಮ್ಮ ಸಹಕಾರವಿರುತ್ತದೆ ಎಂದು ಹಾರಕೂಡ ಶ್ರೀಗಳು ತಿಳಿಸಿದರು.
ಮಾತೆ ಸತ್ಯಾದೇವಿ ವಿರಚಿತ ‘ವಚನ ಸಂಗಮ’ ಮತ್ತು ‘ಯೋಗಾಂಗ ತ್ರಿವಿಧಿ’ ಕೃತಿಗಳನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಸ್.ನಾಗರಾಳೆ ಬಿಡುಗಡೆಗೊಳಿಸಿ ಮಾತನಾಡಿ, ಜಾಗತಿಕ ಸಮಸ್ಯೆಗಳಿಗೆ ಬಸವ ತತ್ವವೇ ಔಷಧಿಯಾಗಿದೆ. ವಿಶ್ವಶಾಂತಿಗಾಗಿ ವಚನ ಸಾಹಿತ್ಯಾಧ್ಯಯನ ಅತ್ಯವಶ್ಯಕ ಎಂದರು.ಹುಬ್ಬಳ್ಳಿ ಹೊಸಮಠದ ಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಸ್ವಾಮೀಜಿ ಬಸವ ಧ್ಜಜಾರೋಹಣ ನೆರವೇರಿಸಿ ಮಾತನಾಡಿ, 2025ರ ಮೇ ತಿಂಗಳಲ್ಲಿ ಲಂಡನ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಬಸವ ತತ್ವ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಶಿವಮೊಗ್ಗ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯಬಸವಾನಂದ ಸ್ವಾಮೀಜಿ ಚಿಕ್ಕಮಗಳೂರು, ಮಾತೆ ಶಾಂತಾದೇವಿ ಧಾರ ವಾಡ, ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರು, ಕಾಂಗ್ರೆಸ್ ಮುಖಂಡರಾದ ಧನರಾಜ ತಾಳಂಪಳ್ಳಿ, ಬಸವಕಲ್ಯಾಣದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ, ಹುಬ್ಬಳ್ಳಿಯ ಸೂಫಿ ಸಂತರು, ಕೊಪ್ಪಳದ ವೀರಣ್ಣ ಕರ‍್ಲಳ್ಳಿ, ಕಲ್ಲಪ್ಪ ದೇಶಮುಖ, ಶಿವರಾಜ ಪಾಟೀಲ್ ಅತಿವಾಳ, ಬೆಂಗಳೂರಿನ ಶ್ರೀಶೈಲ ಮಸೂತಿ ಸೇರಿದಂತೆ ಇತರರು ಇದ್ದರು.ಚಿತ್ರದುರ್ಗದ ಕು.ತರಂಗಿಣಿ, ಕಲಬುರಗಿಯ ಕು. ಶ್ರೇಯಾ ಚೀಲಾ ಅವರ ವಚನ ನೃತ್ಯ ಸಭೀಕರ ಗಮನ ಸೆಳೆಯಿತು. ಮಂಡ್ಯ ಜಿಲ್ಲೆ ಮದ್ದೂರಿನ ಜನ್ಯ ಮ್ಯೂಜಿಕ್ ಅಕಾಡೆಮಿಯ ಹರ್ಷಿತಾ ಮತ್ತು ಶಿವು ಮದ್ದೂರ ಅವರ ಭಕ್ತಿ ಗೀತೆಗಳ ಗಾಯನ ನೆರೆದ ಭಕ್ತರ ಹುಬ್ಬೇರಿಸುವಂತೆ ಮಾಡಿತು.
ಒಳ ಹೊರಗೆ ಶುದ್ಧವಾಗಿಟ್ಟುಕೊಂಡು ಪರ್ವ ನಡೆಸಲಿ: ಚನ್ನಬಸವಾನಂದ ಶ್ರೀಸ್ವಾಭಿಮಾನಿ ಕಲ್ಯಾಣ ಪರ್ವದ ಅಧ್ಯಕ್ಷರಾದ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ನಡೆದಾಡಿದ ಕಲ್ಯಾಣದ ನೆಲದಲ್ಲಿ ಪ್ರತೀ ವರ್ಷ ಹೆಚ್ಚು ಹೆಚ್ಚು ಕಲ್ಯಾಣ ಪರ್ವಗಳು ನಡೆಯಬೇಕು. ಕಲ್ಯಾಣದ ಕೀರ್ತಿ ವಿಶ್ವದಾದ್ಯಂತ ಬೆಳಗಬೇಕೆಂಬುದು ಪೂಜ್ಯ ಲಿಂಗಾನಂದ ಸ್ವಾಮೀಗಳು, ಪೂಜ್ಯ ಮಾತಾಜಿಯವರ ಸದಾಶಯವಾಗಿತ್ತು. ಇದೀಗ ಅವರ ನಿಜ ವಾರಸುದಾರರಾಗಿ ಸ್ವಾಭಿಮಾನಿ ಶರಣರು ಅವರ ಪರಂಪರೆ ಮುನ್ನಡೆಸಿಕೊಂಡು ಹೋಗುತಿದ್ದಾರೆ. ಇದು ಸೂರ್ಯ ಚಂದ್ರ ಇರುವವರೆಗೆ ಸಾಗಲಿದೆ. ಒಳ ಹೊರಗೆ ಶುದ್ಧವಾಗಿಟ್ಟುಕೊಂಡು ಪರ್ವಗಳನ್ನು ನಡೆಸಬೇಕೆಂದರು.