ದೂರು ನೀಡಲು ಹೋದವನಿಗೆ ಅವಾಚ್ಯಗಳಿಂದ ನಿಂದನೆ: ದಲಿತ ಸಂಘಟನೆ ಪ್ರತಿಭಟನೆ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಬಿಜೆಪಿ ಮುಖಂಡ ಚಂದ್ರು ಮಾತನಾಡಿ, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಇಲ್ಲಿ ಕರ್ತವ್ಯ ನಿರ್ವಹಿಸುವ ಪಿ ಐ, ಎಸ್ ಐ ಹಾಗೂ ಸಿಬ್ಬಂದಿಗಳು ಉತ್ತಮ ಆಡಳಿತ ನೀಡುವುದರ ಮೂಲಕ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ತಾವುಗಳು ಅದನ್ನು ಅರಿತು ಕೆಲಸ ಮಾಡಬೇಕು ಎಂದರು.

ಹಾರೋಹಳ್ಳಿ: ದೂರು ನೀಡಲು ಹೋದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇನ್ಸ್‌ಪೆಕ್ಟರ್ ನಡೆ ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಠಾಣೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಪೊಲೀಸ್ ಠಾಣೆಯ ಎದುರು ದಲಿತ ಮುಖಂಡರು ಇನ್ಸ್‌ಪೆಕ್ಟರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಹಾರೋಹಳ್ಳಿ ಕೋಟೆ ನಿವಾಸಿ ಕಾರ್ತಿಕ್ ಎಂಬ ಯುವಕ ಗಲಾಟೆ ಸಂಬಂಧ ದೂರು ನೀಡಲು ಹೋದ ಸಂದರ್ಭದಲ್ಲಿ ಹಾರೋಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅರ್ಜುನ್ ದೂರು ಸ್ವೀಕರಿಸದೆ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ನಿಂದಿಸಿದ್ದು ಸರಿಯಲ್ಲ. ಇದು ದಲಿತ ಯುವಕನಿಗೆ ಮಾಡಿದ ಅವಮಾನ ಎಂದರು.

ಯುವಕನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಇವರು ಸಾಮಾನ್ಯ ಜನರಿಗೆ ಯಾವ ರೀತಿ ಸಹಕಾರ ನೀಡುತ್ತಾರೆ. ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಆದ ನಂತರ ಹಲವು ರೀತಿಯ ಗಾಂಜಾ, ಡಕಾಯಿತಿ, ಕಳ್ಳತನ ಹೀಗೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸ ಆಗುತ್ತಿಲ್ಲ. ಅದರ ಬದಲು ಇಲ್ಲಿಗೆ ಬರುವ ಪೊಲೀಸ್ ಇನ್ಸ್‌ಪೆಕ್ಟರ್ ಹಣ ಮಾಡುವ ಕಡೆ ಗಮನ ನೀಡಿ ರಿಯಲ್ ಎಸ್ಟೇಟ್ ಮಾಡುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಚಂದ್ರು ಮಾತನಾಡಿ, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಇಲ್ಲಿ ಕರ್ತವ್ಯ ನಿರ್ವಹಿಸುವ ಪಿ ಐ, ಎಸ್ ಐ ಹಾಗೂ ಸಿಬ್ಬಂದಿಗಳು ಉತ್ತಮ ಆಡಳಿತ ನೀಡುವುದರ ಮೂಲಕ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ತಾವುಗಳು ಅದನ್ನು ಅರಿತು ಕೆಲಸ ಮಾಡಬೇಕು ಎಂದರು.

ಕ್ಷಮೆಯಾಚನೆ :

ಇನ್ನು ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಅರ್ಜುನ್ ಮಾತನಾಡಿ, ಠಾಣೆಗೆ ಬರುವ ಪ್ರತಿಯೊಬ್ಬರನ್ನು ಗೌರವಿಸಬೇಕಾದದ್ದು ನಮ್ಮ ಕರ್ತವ್ಯ. ಮಾತಿನ ಭರದಲ್ಲಿ ಮಾತನಾಡಿದ್ದು ಯಾವ ಸಮುದಾಯಕ್ಕೂ ನೋವಾಗುವ ರೀತಿ ವರ್ತಿಸಿಲ್ಲ ನೋವುಟಾಗಿದರೆ ಕ್ಷಮೆಯಿರಲಿ. ಮುಂದೆ ಇಂತಹ ಘಟನೆಗಳು ನಡೆಯದಂತೆ ಸ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು. ಆನಂತರ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.

ಹಾರೋಹಳ್ಳಿ ಚಂದ್ರು,ಬನಶಂಕರಿ ನಾಗು, ಅನಂತ್, ಗೋವಿಂದ, ಮರಳವಾಡಿ ಮಂಜು, ಲಕ್ಷ್ಮಣ್ ಕಲ್ಬಾಳ್ ಹಾಜರಿದ್ದರು.

Share this article