ಸಂಡೂರು: ಹುಟ್ಟಿನಿಂದ ಮೊದಲುಗೊಂಡು ಜನರ ಜೀವನದ ವಿವಿಧ ಮಜಲುಗಳನ್ನು ಛಾಯಾಚಿತ್ರಗಳ ಮೂಲಕ ಸೆರೆ ಹಿಡಿದು ಅವರ ನೆನಪುಗಳನ್ನು ಸದಾ ಹಸಿರಾಗಿಡುವಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ ಎಂದು ಸಂಸದ ಈ. ತುಕಾರಾಂ ಅಭಿಪ್ರಾಯಪಟ್ಟರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಡೂರು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ೧೮೫ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂಡೂರು ಫಿಲ್ಮ್ ಸಿಟಿ ರೂಪಿಸುವ ಯೋಜನೆ: ತಾಲೂಕಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಯೋಜಿಸಲಾಗಿದೆ. ರಾಮೋಜಿ ಫಿಲ್ಮ್ ಸಿಟಿ ತರಹ ಸಂಡೂರು ಬಳಿಯಲ್ಲಿ ೧೫೦ ಎಕರೆ ಪ್ರದೇಶದಲ್ಲಿ ಸಂಡೂರು ಫಿಲ್ಮ್ ಸಿಟಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಸ್ವಾಮಿಹಳ್ಳಿಯವರೆಗಿನ ರೈಲ್ವೆ ಮಾರ್ಗವನ್ನು ಮೊಣಕಾಲ್ಮೂರುವರೆಗೆ ವಿಸ್ತರಿಸಲಾಗುವುದು. ₹೯ ಕೋಟಿ ವೆಚ್ಚದಲ್ಲಿ ನಾರಿಹಳ್ಳ ಜಲಾಶಯವನ್ನು ಅಭಿವೃದ್ಧಿ ಪಡಿಸಲಾಗುವುದು. ₹೫ ಕೋಟಿ ವೆಚ್ಚದಲ್ಲಿ ನವಿಲುಸ್ವಾಮಿ ದೇವಸ್ಥಾನಕ್ಕೆ ರಸ್ತೆಯನ್ನು ನಿರ್ಮಿಸಲಾಗುವುದು. ಇದರಿಂದ ಛಾಯಾಗ್ರಾಹಕರಿಗೂ ಅನುಕೂಲವಾಗಲಿದೆ. ಸಂಡೂರಿನಲ್ಲಿ ಛಾಯಾಗ್ರಾಹಕರ ಭವನ ನಿರ್ಮಾಣಕ್ಕೆ ₹೫೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಾಜ್ಯ ಸಮಿತಿ ಅಧ್ಯಕ್ಷ ಎಚ್.ಎಸ್. ನಾಗೇಶ್ ಮಾತನಾಡಿ, ಸಂಡೂರಿನ ದಿ.ಎಂ.ವೈ. ಘೋರ್ಪಡೆ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾಗಿದ್ದರು. ಛಾಯಾಗ್ರಾಹಕರನ್ನು ಅಸಂಘಟಿಕ ಕಾರ್ಮಿಕರ ಗುಂಪಿಗೆ ಸೇರಿಸುವ ಮೂಲಕ ಛಾಯಾಗ್ರಾಹಕರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ದೊಡ್ಡ ಉಪಕಾರ ಮಾಡಿದ್ದಾರೆ. ಸಮಸ್ತ ಛಾಯಾಗ್ರಾಹಕರ ಪರವಾಗಿ ಸಿದ್ದರಾಮಯ್ಯ ಹಾಗೂ ಸಂತೋಷ್ ಲಾಡ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ೨ ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರಿದ್ದಾರೆ. ಎಲ್ಲರೂ ಸಂಘಟಿತರಾಗಬೇಕಿದೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಅಥಣಿಯ ಬಸವರಾಜ್ ಉಮ್ರಾಣಿ ಹಾಗೂ ದೇವದುರ್ಗದ ರಾಜ್ಯ ಸಂಪನ್ಮೂಲ ವ್ಯಕ್ತಿ ರಮೇಶ್ ಬೆಲ್ಲದ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿಹೆಚ್ಚು ಅಂಕ ಗಳಿಸಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ತಲಾ ಮೂವರು ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ, ಎಸ್.ಎಂ. ವಿನಯ್‌ಕುಮಾರ್ ಅಧ್ಯಕ್ಷತೆ, ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಕಿ ಚಂದ್ರಿಕಾ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎ. ಕಾಶಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕರ್ನಾಟಕ ಫೋಟೊಗ್ರಾಫರ್ಸ್ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಎಂ. ಮುರಳಿ, ಸಂಘಟನಾ ಕಾರ್ಯದರ್ಶಿ ಕೆ.ವೀರೇಶ್, ನಿಕಟಪೂರ್ವ ಅಧ್ಯಕ್ಷ ಪರಮೇಶ್ವರ್, ಬಳ್ಳಾರಿ ಫೋಟೋಗ್ರಾಫರ್ಸ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಡಗೌಡ ಚಂದ್ರಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಸಂಡೂರು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಗೌರವಾಧ್ಯಕ್ಷ ಟಿ. ಜಿಲಾನ್, ಉಪಾಧ್ಯಕ್ಷರಾದ ಜೆ. ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಕೆ.ವಿ. ಸತ್ಯನಾರಾಯಣ, ಜಂಟಿ ಕಾರ್ಯದರ್ಶಿ ಎಸ್. ಚಿದಾನಂದ, ಖಜಾಂಚಿ ಪರಶುರಾಮ ಮದ್ದಾನಿ, ಸಂಘಟನಾ ಕಾರ್ಯದರ್ಶಿಗಳಾದ ಕೆ. ಸಾದಿಕ್, ರಾಮಕೃಷ್ಣ, ಶಿವಮೂರ್ತಿ, ನಿಂಗನಗೌಡ, ಕೆ.ರಾಜಾರಾವ್, ಪತ್ರಿಕಾ ಸಲಹೆಗಾರರಾದ ಬಿ.ಎಂ. ಪ್ರಕಾಶ್, ಮುಖಂಡರಾದ ಸಿ.ಎಂ. ಶಿಗ್ಗಾವಿ, ಎ.ಎಂ. ಶಿವಮೂರ್ತಿಸ್ವಾಮಿ, ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.