ಎಸ್.ಎಂ. ಸೈಯದ್ಗಜೇಂದ್ರಗಡ: ಪಟ್ಟಣದ ಪ್ರಮುಖ ರಸ್ತೆಯಾದ ಜೋಡು ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿಯ ಮುಂದೆ ಮೂಗು ಮುಚ್ಚಿಕೊಂಡು ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ದುಸ್ಥಿತಿ ಬಂದಿದೆ. ಇದನ್ನು ನೋಡಿದ ಸುತ್ತಲಿನ ಗ್ರಾಮಸ್ಥರು ಪಟ್ಟಣಕಿಂತ ನಮ್ಮ ಹಳ್ಳಿಗಳೇ ಎಷ್ಟೋ ಉತ್ತಮ ಎಂದು ಹೇಳಿಕೊಳ್ಳುವಂತಾಗಿದೆ.
ಎಪಿಎಂಸಿ ಎದುರಿನ ಬಯಲು ಜಾಗದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿಯೂ ಬೇಕಾಬಿಟ್ಟಿಯಾಗಿ ತರಕಾರಿ, ಹೂವು ಹಾಗೂ ಕಸ ಎಸೆಯುವುದು ಸಾಮಾನ್ಯ. ಪರಿಣಾಮ ಪಟ್ಟಣಕ್ಕೆ ಬರುವ ಸುತ್ತಲಿನ ಗ್ರಾಮಗಳ ಜನರು ಗಜೇಂದ್ರಗಡ ಪಟ್ಟಣಕಿಂತ ನಮ್ಮ ಹಳ್ಳಿಗಳೇ ಸ್ವಚ್ಛತೆಯಲ್ಲಿ ಎಷ್ಟೋ ಮೇಲು ಎಂದು ಹೇಳುತ್ತಾರೆ.
ಮಳೆಗಾಲ ಆರಂಭಕ್ಕೆ ಕೆಲವೇ ದಿನ ಬಾಕಿ ಇದ್ದರೂ ಚರಂಡಿಗಳ ಸ್ವಚ್ಛತೆಗೆ ಪುರಸಭೆ ಮುಂದಾಗಿಲ್ಲ. ಪರಿಣಾಮ ದೊಡ್ಡ ಮಳೆಯಾದರೆ ಚರಂಡಿಗಳಲ್ಲಿನ ಕಸ ಸಂಪೂರ್ಣವಾಗಿ ರಸ್ತೆಗಳ ಮೇಲೆ ನಿಲ್ಲಲಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಇನ್ನಾದರೂ ಪಟ್ಟಣದ ಸ್ವಚ್ಛತೆಗೆ ಮುಂದಾಗಲಿ ಎಂಬುದು ಬೀದಿಬದಿ ವ್ಯಾಪಾರಿಗಳ ಆಗ್ರಹವಾಗಿದೆ.ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಗಜೇಂದ್ರಗಡ ಪಟ್ಟಣ ರಾಜ್ಯದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತಾ ಬರುತ್ತಿದೆ. ಆದರೆ ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆ, ಯಥೇಚ್ಛವಾಗಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಹೀಗಿದ್ದಾಗಲೂ ಗಜೇಂದ್ರಗಡ ಪುರಸಭೆಗೆ ಯಾವ ಮಾನದಂಡದಲ್ಲಿ ಅಂಕಗಳನ್ನು ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ ಪಟ್ಟಣಗಳ ಪಟ್ಟಿಯಲ್ಲಿ ಸ್ಥಾನವನ್ನು ನೀಡಲಾಗುತ್ತಿದೆ ಎಂದು ನಿವಾಸಿಗಳು ಸ್ವಚ್ಛ ಸರ್ವೇಕ್ಷಣಾ ಅಭಿಯಾನವನ್ನು ಪ್ರಶ್ನಿಸುತ್ತಿದ್ದಾರೆ.ಪಟ್ಟಣದ ಜೋಡುರಸ್ತೆಯಲ್ಲಿ ಕಳೆದ ಒಂದು ವಾರದಿಂದ ಚರಂಡಿಯಲ್ಲಿದ್ದ ಕಸದ ರಾಶಿಯನ್ನು ಹಾಕಿದ್ದಾರೆ. ಸುಡು ಬಿಸಿಲಿನ ಝಳ ಒಂದೆಡೆಯಾದರೆ ಇತ್ತ ಗಬ್ಬು ವಾಸನೆ ಸಹಿಸಿಕೊಳ್ಳಬೇಕು. ವ್ಯಾಪಾರಕ್ಕೆ ಬಂದ ಹಳ್ಳಿ ಜನರು, ಗಡಾ ಸ್ವಚ್ಛ ಐತಿ ಅಂತಾರ್. ಆದರೆ ಗಡಾದ ರಸ್ತೆಗಳಲ್ಲಿ ಎಷ್ಟೊಂದು ಕಸ, ಗಲೀಜು ಬಿದ್ದೈತಿ ಎಂದು ಮೂಗು ಮುಚ್ಚಿಕೊಂಡು ವ್ಯಾಪಾರ, ವಹಿವಾಟು ನಡೆಸುತ್ತಾರೆ ಎಂದು ಜೋಡು ರಸ್ತೆ ಬೀದಿಬದಿ ವ್ಯಾಪಾರಿಗಳು ತಿಳಿಸಿದರು.ಗಜೇಂದ್ರಗಡ ಪಟ್ಟಣದ ಪ್ರಮುಖ ರಸ್ತೆ ಬದಿಯಲ್ಲಿ ಬಿದ್ದಿರುವ ಅದರಲ್ಲೂ ಜೋಡುರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಶಿ ತೆರವಿಗೆ ತಕ್ಷಣದಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಆರೋಗ್ಯ ಅಧಿಕಾರಿ ಶಿವಕುಮಾರ ಇಲಾಳ ತಿಳಿಸಿದರು.