ಕೇಂದ್ರದ ಹೊಸ ನಿಯಮಗಳು ಕಾಮಗಾರಿಗೆ ಆತಂಕಕಾರಿ ಆಗಿವೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಅಗತ್ಯಕ್ಕನುಗುಣವಾಗಿ ಕಾಮಗಾರಿ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಾಯಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಕೂಲಿಯನ್ನೇ ಕಸಿದುಕೊಂಡಿದೆಯಲ್ಲದೆ, ಗ್ರಾಮೀಣ ಅಭಿವೃದ್ಧಿಗೆ ಮಾರಕವೂ ಆಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಯುಪಿಎ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಮೂಲಕ ಶೇ. ೭೫ರಷ್ಟು ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. ಮೋದಿ ವಿಬಿ-ಜಿ ರಾಮ್ ಜಿ ಎಂದು ಯೋಜನೆ ಹೆಸರು ಬದಲಾವಣೆ ಮಾಡಿ ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದೆ. ವರ್ಷದಲ್ಲಿ ನೂರು ದಿನ ಕೂಲಿ ಕಾರ್ಮಿಕರಿಗೆ ವಲಸೆಗೆ ಅವಕಾಶವಿಲ್ಲದಂತೆ ಸ್ಥಳೀಯವಾಗಿಯೇ ಇದ್ದು ದುಡಿದು ಬದುಕುವ ಕೈಗಳ ಕೆಲಸವನ್ನು ಕಸಿದುಕೊಂಡಿದೆ ಎಂದು ಹೇಳಿದರು. ಕೇಂದ್ರದ ಹೊಸ ನಿಯಮಗಳು ಕಾಮಗಾರಿಗೆ ಆತಂಕಕಾರಿ ಆಗಿವೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಅಗತ್ಯಕ್ಕನುಗುಣವಾಗಿ ಕಾಮಗಾರಿ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ. ಶಾಲೆಗಳಲ್ಲಿ ವಿವಿಧ ಅಭಿವೃದ್ಧಿಗೆ ಪೂರಕವಾಗಿದ್ದ ಯೋಜನೆ ಈಗ ಇಲ್ಲದಂತಾಗಿದೆ. ಗ್ರಾಮ ಪಂಚಾಯಿತಿಗಳ ಸ್ವಾತಂತ್ರ್ಯ ಹರಣ ಮಾಡಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಮನರೇಗಾದಡಿ ಸಾಕಷ್ಟು ಕೆಲಸಗಳು ನಡೆಯುತ್ತಿದ್ದವು. ಆದರೆ ಮೇ ತಿಂಗಳು ಮುಗಿಯುತ್ತಾ ಬಂದರೂ ಮನರೇಗಾ ಹೊಸ ಸ್ವರೂಪದ ಬಗ್ಗೆ ಸೂಕ್ತ ಮಹಿತಿ ಇಲ್ಲದೇ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿದಿದೆ. ೨೦೨೪-೨೫ನೇ ಸಾಲಿನಲ್ಲಿ ತಾಲೂಕಿನಲ್ಲಿ ₹೨೬ ಕೋಟಿ ಅನುದಾನ ಮನರೇಗಾದಡಿ ಲಭಿಸಿದ್ದರೆ, ೨೦೨೫-೨೬ರಲ್ಲಿ ₹೧೦ ಕೋಟಿಗೆ ಇಳಿದಿದೆ. ಗ್ರಾಮ ಸ್ವರಾಜ್ಯದ ಕನಸು ಭಗ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆಗಳಿಗೆ ಬರಬೇಕಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಹಣ ಬರುತ್ತಿಲ್ಲ. ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಹೆಜ್ಜೆ ಹಾಕುತ್ತಿದೆ. ಸರ್ವಾಧಿಕಾರಿಯಾಗಿ ರಾಜ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರದಲ್ಲಿದೆ. ಇದನ್ನು ವಿರೋಧಿಸುತ್ತೇವೆ. ಅಲ್ಲದೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ ಎಂದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಮನರೇಗಾ ಮುಂದುವರಿಸುವುದು ಅನಿವಾರ್ಯ. ೨೦೨೪ನೇ ಸಾಲಿನಲ್ಲಿ ಬೆಳೆಹಾನಿ ಪರಿಹಾರವನ್ನು ಕೋರ್ಟ್ ಮೊರೆ ಹೋಗಿ ಪಡೆದಂತೆ ಮನರೇಗಾ ಪುನರ್‌ಸ್ಥಾಪನೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಆಸರೆ, ಅಭಿವೃದ್ಧಿಗೆ ಮೂಲಾಧಾರವಾಗಿದ್ದ ಖಾತ್ರಿ ಯೋಜನೆಯನ್ನು ಮರುಜಾರಿಗೊಳಿಸಿ ಒಕ್ಕೂಟ ವ್ಯವಸ್ಥೆಗೆ ಗೌರವ ನೀಡುವಂತೆ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.