ಹಾನಗಲ್ಲ: ಮಾನವನ ಉಸಿರು ಉಳಿಯಬೇಕಾದರೆ ಪರಿಸರ ಹಸಿರಾಗಿರಬೇಕು, ಹೊಗೆರಹಿತ ಜೀವನಕ್ಕೆ ಮುಂದಾಗಬೇಕಲ್ಲದೆ ಇದರಲ್ಲಿ ಪ್ರತಿ ಪ್ರಜೆಯ ಜವಾಬ್ದಾರಿಯೂ ಅತಿ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.
ಸಾಹಿತಿ ಡಾ. ಎಂ. ಪ್ರಸನ್ನಕುಮಾರ ಮಾತನಾಡಿ, ನಾವು ಬದುಕಲು ನಮ್ಮ ಪರಿಸರ ಉಳಿಬೇಕು. ಪರಿಸರದ ಅಸಮತೋಲನದಿಂದಾಗಿಯೇ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಚಂಡಮಾರುತಗಳಂತಹ ವಿಕೋಪಗಳಿಗೆ ತುತ್ತಾಗುತ್ತಿದ್ದೇವೆ. ಪರಿಸರವನ್ನು ತಿಳಿದು ತಿಳಿಯದೆಯೋ ಹಾಳು ಮಾಡಿ ಮಾನವ ಕುಲ ಸಾವಿನ ಕಡೆಗೆ ಮುಖ ಮಾಡುತ್ತಿದೆ. ಈಗಲಾದರೂ ಎಚ್ಚರಗೊಳ್ಳದಿದ್ದರೆ ಇಡೀ ಮಾನವ ಕುಲವೇ ನಾಶವಾಗುವ ಎಲ್ಲ ಲಕ್ಷಣಗಳು ನಮ್ಮ ಮುಂದಿವೆ. ಅರಣ್ಯ ನಾಶ, ಒತ್ತುವರಿ, ಕಾಂಕ್ರೀಟ್ ಕಾಡು ಕಟ್ಟುತ್ತಿರುವ ಭಯಾನಕ ಸಂಗತಿಗಳು ಭವಿಷ್ಯದ ಅರಿವಿಲ್ಲದೆ ನಡೆಯುತ್ತಿವೆ. ನಾವು ಉಳಿಯಲು ಪರಿಸರ ಉಳಿಸೋಣ ಎಂದರು.
ಆಶಯ ನುಡಿ ನುಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಬದಲಾದ ಕಾಲಕ್ಕೆ ಕಾಡು-ಮೇಡುಗಳನ್ನು ಹಾಳು ಮಾಡುವ ಮನೋಸ್ಥಿತಿಯಿಂದ ಹೊರಬರುವ ಅನಿವಾರ್ಯತೆ ಈಗ ನಮಗಿದೆ. ಇಡಿ ಮಾನವ ಕುಲದ ಒಳಿತಿನಲ್ಲಿ ನನ್ನ ಪಾಲು ಇದೆ ಎಂಬ ಎಚ್ಚರಿಕೆ ಬೇಕು. ಮಕ್ಕಳಿಗೆ ಈಗಲೇ ಪರಿಸರದ ಅಗತ್ಯ, ಕಾಪಾಡುವ ಅನಿವಾರ್ಯತೆಯ ಪರಿಚಯ ಆಗಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಭಾರತ ಜ್ಞಾನವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ವಿ. ಹೊಸಮನೆ ಶಾಲೆ ಕಾಲೇಜುಗಳಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಈಗ ಪ್ರಕೃತಿಯ ಪೋಷಣೆಗೆ ಘೋಷಣೆ ಮೊಳಗಬೇಕು. ನೀರು ಭೂಮಿ ಪರಿಸರ ಉಳಿಸುವ ಕಾಳಜಿ ಕಾರ್ಯರೂಪಕ್ಕೆ ಬರಬೇಕು. ಪರಿಸರ ಸಂರಕ್ಷಣೆ ಮುಖ್ಯ ಶಿಕ್ಷಣವಾಗುವ ತೀರ ಅಗತ್ಯವಿದೆ ಎಂದರು.