ಲ್ಯಾಂಡ್‌ ಆಗದೇ 3 ಗಂಟೆ ಸುತ್ತಾಡಿದ ವಿಮಾನ!

KannadaprabhaNewsNetwork |  
Published : Apr 21, 2026, 02:00 AM IST
Plane

ಸಾರಾಂಶ

ಹೈದರಾಬಾದ್‌- ಹುಬ್ಬಳ್ಳಿ- ಬೆಂಗಳೂರು ನಡುವೆ ಎರಡು ದಿನದ ಹಿಂದೆಯಷ್ಟೇ (ಏ.17) ವಿಮಾನ ಸೇವೆ ಆರಂಭಿಸಿದ್ದ ಫ್ಲೈ-91 ಭಾನುವಾರ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗದೆ ಬರೋಬ್ಬರೀ 3 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಸುತ್ತಿದೆ.

  ಹುಬ್ಬಳ್ಳಿ :  ಹೈದರಾಬಾದ್‌- ಹುಬ್ಬಳ್ಳಿ- ಬೆಂಗಳೂರು ನಡುವೆ ಎರಡು ದಿನದ ಹಿಂದೆಯಷ್ಟೇ (ಏ.17) ವಿಮಾನ ಸೇವೆ ಆರಂಭಿಸಿದ್ದ ಫ್ಲೈ-91 ಭಾನುವಾರ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗದೆ ಬರೋಬ್ಬರೀ 3 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಸುತ್ತಿದೆ. ಬಳಿಕ ಬೆಂಗಳೂರಿಗೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ತಾಂತ್ರಿಕ ಕಾರಣದಿಂದಾಗಿ ಈ ರೀತಿ ಆಗಿದೆ ಎಂದು ಪ್ರಯಾಣಿಕರು ದೂರಿದರೆ, ಅಧಿಕಾರಿಗಳು ಹವಾಮಾನ ವೈಪರೀತ್ಯ ಎಂದಿದ್ದಾರೆ.

18 ಜನ ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ 25ಕ್ಕೂ ಹೆಚ್ಚು ಜನರು ಸುರಕ್ಷಿತವಾಗಿದ್ದಾರೆ. ಆದರೆ, ಪ್ರಯಾಣಿಕರು ಭಯಭೀತರಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫ್ಲೈ-91 ಸೇವೆ ಆರಂಭಿಸಿ ಎರಡೇ ದಿನದಲ್ಲಿ ಈ ಘಟನೆ ನಡೆದಿರುವುದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸ್ಥೆಯ ಸೇವೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?:

ಹೈದರಾಬಾದ್‌ನಿಂದ ಭಾನುವಾರ ಮಧ್ಯಾಹ್ನ 3ಕ್ಕೆ ಹೊರಟಿದ್ದ ಫ್ಲೈ-91ಏರ್‌ಲೈನ್ಸ್ IC3401 (ATRTURBOPROP AT7) ನಿಗದಿಯಂತೆ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ವಿಮಾನವು ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಡಿ ಬಳಿಕ ಬೆಂಗಳೂರಿಗೆ ತೆರಳಿ ಸಂಜೆ 7.30ಕ್ಕೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಇದರಿಂದ 3 ತಾಸು ಆಕಾಶದಲ್ಲಿ ವಿಮಾನ ಹಾರಾಡಿದ್ದರಿಂದ ಪ್ರಯಾಣಿಕರು ಭಯಭೀತರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ವಿಮಾನ ಅಲ್ಲಿಂದ ಹುಬ್ಬಳ್ಳಿಗೆ ರಾತ್ರಿ 9ರ ಸುಮಾರಿಗೆ ಆಗಮಿಸಿ ಹೈದರಾಬಾದ್‌ಗೆ ತೆರಳಿದೆ.

ಕಣ್ಣೀರು, ಆತಂಕ:

ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗದೆ ಆಕಾಶದಲ್ಲಿ ವಿಮಾನ ಸುತ್ತಿದ್ದರಿಂದ ಪ್ರಯಾಣಿಕರು ಕಣ್ಣೀರು ಹಾಕುತ್ತಾ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಆರಂಭದಲ್ಲೇ ಫ್ಲೈ-91 ವಿಮಾನ ಸಂಸ್ಥೆ ಈ ರೀತಿ ಸೇವೆ ನೀಡಿದರೆ ಮುಂದಿನ ದಿನಗಳಲ್ಲಿ ಏನು ಗತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಪ್ರಯಾಣಿಕರು ಹುಬ್ಬಳ್ಳಿಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್‌ ಆಗದಿದ್ದರೆ ಹೈದರಾಬಾದ್‌ಗೆ ವಾಪಾಸ್‌ ಹೋಗಿ ಎಂದಿದ್ದಾರೆ. ಕೆಲವರು ಬೆಳಗಾವಿ ಅಥವಾ ಬೆಂಗಳೂರಿಗೆ ಹೋಗಿ. ವಿಮಾನದಲ್ಲಿ ಯಾವ ಸಮಸ್ಯೆಯಾಗಿದೆ ಎಂದು ಹೇಳಿ ಎಂದು ಸಿಬ್ಬಂದಿಯನ್ನು ಕೇಳುತ್ತಿರುವ ವಿಡಿಯೋಗಳು ಸಹ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಹವಾಮಾನ ವೈಪರೀತ್ಯ ಹೇಗೆ ಸಾಧ್ಯ?

ಈ ನಡುವೆ ಸಂಜೆ 5ರ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಇಂಡಿಗೋ ವಿಮಾನವೂ ಸುರಕ್ಷಿತವಾಗಿಯೇ ಲ್ಯಾಂಡ್‌ ಆಗಿದೆ. ಅದಕ್ಕೆ ಇಲ್ಲದ ಹವಾಮಾನ ವೈಪರೀತ್ಯ, ಫ್ಲೈ- 91ಕ್ಕೆ ಹೇಗಾಯಿತು ಎಂಬ ಪ್ರಯಾಣಿಕರ ಪ್ರಶ್ನೆಗೆ ಫ್ಲೈ-91ಏರ್‌ಲೈನ್ಸ್ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ.ತಾಂತ್ರಿಕ ದೋಷ ಇಲ್ಲಹವಾಮಾನ ವೈಪರೀತ್ಯದಿಂದಾಗಿ ಫ್ಲೈ-91 ವಿಮಾನ ಭಾನುವಾರ ಸಂಜೆ 4.30ಕ್ಕೆ ಲ್ಯಾಂಡ್‌ ಆಗಿರಲಿಲ್ಲ. ಬೆಂಗಳೂರಿಗೆ ಕಳುಹಿಸಿ ಲ್ಯಾಂಡ್‌ ಮಾಡಿಸಲಾಯಿತು. ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ.-ಪಿ.ಎಂ. ಜಾಧವ, ಡಿಜಿಎಂ (ಎಂಜಿನಿಯರಿಂಗ್‌ ಸಿವಿಲ್‌) ಹುಬ್ಬಳ್ಳಿ ವಿಮಾನ ನಿಲ್ದಾಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆ ಮಾಹಿತಿ ಕಾರ್ಯಕ್ರಮ
ಒಟ್ಟಾಗದ ಹೊರತು ಪ್ರತ್ಯೇಕ ಧರ್ಮದ ಸ್ಥಾನಮಾನ ಕಷ್ಟ: ಪ್ರೊ. ಸಂಜಯಕುಮಾರ