ಗ್ರಾಮಸ್ಥರಿಂದ ಕೊಪ್ಪ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ, ತಹಸೀಲ್ದಾರ್‌ಗೆ ಮನವಿ
ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಬೈರಾಪುರ ಗ್ರಾಮದಲ್ಲಿ ವಾಸವಾಗಿರುವ ಭದ್ರಾ ಮುಳುಗಡೆ ಸಂತ್ರಸ್ತರ ಜಮೀನನ ಸಮಸ್ಯೆ ಬಗೆಹರಿಸುವಂತೆ ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ನೇತೃತ್ವದಲ್ಲಿ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹಾಗೂ ಎನ್.ಆರ್.ಪುರ ತಹಸೀಲ್ದಾರ್ ನೂರುಲ್ ಹುದಾ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.ಮನವಿಯಲ್ಲಿ, ಬೈರಾಪುರ ಗ್ರಾಮಸ್ಥರಾದ ನಾವು ಭದ್ರಾ ಮುಳಗಡೆ ಸಂತ್ರಸ್ತರಾಗಿ ಬೈರಾಪುರ ಗ್ರಾಮದ ಸರ್ವೆ ನಂ 37 ರಲ್ಲಿ ವಾಸವಾಗಿದ್ದೇವೆ. 1956–57 ರಲ್ಲಿ ಸರ್ಕಾರದಿಂದ ಭದ್ರಾ ಮುಳುಗಡೆಯಿಂದ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ಸರ್ವೆ ನಂ 37 ಪಿನಲ್ಲಿ 6371.31 ಎಕರೆ ಅರಣ್ಯ ಮತ್ತು 379.28 ಎಕರೆ ಕಂದಾಯ ಎಂದು ಪರಿಗಣಿಸಲಾಗಿದೆ. ಅದರಂತೆ ಭದ್ರಾ ಮುಳುಗಡೆಯಿಂದ ಜಮೀನು ಕಳೆದು ಕೊಂಡ ರೈತರಿಗೆ 224 ಎಕರೆ ಮಂಜೂರು ಮಾಡಿರುತ್ತಾರೆ. ಅದರಂತೆ ರೈತರು ಸರ್ವೆ ನಂ 37ಪಿ ನಲ್ಲಿ ಸಾಗುವಳಿ ಮಾಡಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ 37 ಜನ ರೈತರ ಜಮೀನು ಪೋಡಿಯಾಗಿರುತ್ತದೆ. ಆದರೆ, 13 ರೈತರಿಗೆ ಪಹಣಿಯಲ್ಲಿ ಪೋಡಿ ನಂ ಇಂಡೀಕರಣವಾಗಿರುತ್ತದೆ. ಆದರೆ, ಇನ್ನೂಳಿದ 24 ರೈತರಿಗೆ ಪಹಣಿಯಲ್ಲಿ ಪೋಡಿ ನಂ ಇಂಡೀಕರಣವಾಗಿರುವುದಿಲ್ಲ. ಇದನ್ನು ಸರಿಪಡಿಸಿಕೊಡುವಂತೆ ಹಲವಾರು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನಮ್ಮ ಸಮಸ್ಯೆ ಬಗೆಹರಿಸು ವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ಡಿ.ಜಯರಾಮ್, ಗವಿಯಪ್ಪ, ಚಂದ್ರ,ರಮೇಶ,ಬಾಬು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನರೇಂದ್ರ, ದೇವಂತ್‌ಗೌಡ, ಮುಖಂಡ ಬಿಳಾಲ್ ಮನೆ ಉಪೇಂದ್ರ ಇದ್ದರು.