ಫಕೃದ್ದೀನ್ ಎಂ ಎನ್.
ಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವದಂದು ಆರಂಭವಾದ ಇಂದಿರಾ ಕ್ಯಾಂಟೀನ್ ಹಸಿದವರ ಅನ್ನಕ್ಕೆ ಕನ್ನ ಹಾಕಲು ಮುಂದಾಗಿದೆ. ಸರ್ಕಾರ ಇಷ್ಟು ದರದಲ್ಲಿ ಇಷ್ಟೇ ತೂಕದಳತೆಯ ಊಟ-ಉಪಹಾರ ನೀಡಬೇಕೆಂಬ ನಿಯಮ ಮಾಡಿದೆ. ಅದಕ್ಕನುಗುಣವಾಗಿ ಇಂದಿರಾ ಕ್ಯಾಂಟೀನ್ ನಡೆಸುವವರಿಗೆ ಮೂರು ಪಟ್ಟು ಹಣವನ್ನೂ ನೀಡುತ್ತದೆ.
ಆರಂಭವಾದ ವಾರದಲ್ಲಿಯೇ ತನ್ನ ವರಸೆ ಆರಂಭಿಸಿದ ಇಂದಿರಾ ಕ್ಯಾಂಟೀನ್ ಬಡವರ ತಟ್ಟೆಯಲ್ಲಿನ ಅನ್ನವನ್ನು ಕಸಿಯುವ ಹೊಂಚು ನಡೆಸಿದ್ದಂತೂ ಮರಕು ಹುಟ್ಟಿಸುವಂತಾಗಿದೆ.ಇಲ್ಲಿ ₹5ಗೆ ಒಂದು ಪ್ಲೇಟ್ ಇಡ್ಲಿ (150) ಗ್ರಾಂ ಜತೆಗೆ 150 ಗ್ರಾಂ ಸಾಂಬಾರು ನೀಡಬೇಕು. ಆದರಲ್ಲಿ 90 ಗ್ರಾಂ ನೀಡಲಾಗುತ್ತಿದೆ. ಮಂಡಕ್ಕಿ ಬಜಿ (225) ಗ್ರಾಂ ಇರಬೇಕು. ಬದಲಾಗಿ 110 ಗ್ರಾಂ, ನೀಡಲಾಗುತ್ತಿದೆ. ಈ ಕುರಿತು ಸೋಮವಾರ ಕೆಲ ಗ್ರಾಹಕರು ತಕರಾರು ತೆಗೆದಾಗ ಪುರಸಭೆ ಅಧಿಕಾರಿಗಳು ಬಂದು ಊಟ- ಉಪಹಾರದ ತೂಕ ಮಾಡಿದಾಗ ವ್ಯತ್ಯಾಸ ಕಂಡು ಬಂದಿದ್ದು, ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆವರಿಗೆ ಸರ್ಕಾರದ ನಿಯಮಾನುಸಾರ ಅಳತೆಗೆ ತಕ್ಕ ಹಾಗೆ ಊಟ-ಉಪಹಾರ ನೀಡಬೇಕೆಂದು ಸೂಚಿಸಿದರು.
ಆತುರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಶಾಸಕರು, ಈ ಕುರಿತು ಪರಿಶೀಲಿಸಿ, ಸರ್ಕಾರದ ಲೆಕ್ಕದಲ್ಲಿ ತೂಕದ ಅಳತೆಗೆ ಊಟ ತಿಂಡಿ ನೀಡಿ ಬಡವರ ಹೊಟ್ಟೆಗೆ ಹಿತವಾದ ಊಟ ದೊರಕಿಸುವರೋ ಕಾದು ನೋಡಬೇಕಿದೆ.
ಇಂದಿರಾ ಕ್ಯಾಂಟೀನ್ ಊಟ-ಉಪಹಾರದ ತೂಕದ ವ್ಯತ್ಯಾಸವಾಗಿದ್ದು, ಈ ಕುರಿತು ಸಂಬಂಧಿಸಿದ ಗುತ್ತಿಗೆದಾರರಿಗೆ ಮಾತನಾಡಿ ಸರ್ಕಾರದ ನಿಯಮಾನುಸಾರ ನೀಡುವಂತೆ ಸೂಚಿಸಲಾಗಿದೆ ಎಂದು ನವಲಗುಂದ ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ ಹೇಳಿದರು.