ಸಾಹಿತ್ಯ ಸಿಂಚನದಿಂದ ಪ್ರಕೃತಿ ತಾಣದಲ್ಲೊಂದು ಕವಿಗೋಷ್ಠಿ

KannadaprabhaNewsNetwork |  
Published : Nov 04, 2025, 12:00 AM IST
ಸಾಹಿತ್ಯ | Kannada Prabha

ಸಾರಾಂಶ

ಅದಮ್ಯ ಪ್ರೀತಿ, ಗಾಢವಾದ ಭಕ್ತಿ, ಕಠಿಣವಾದ ಕಷ್ಟ, ಅತೀವ ದುಃಖ, ಸಂತಸದ ಭಾವಗಳು ಮನದಲ್ಲಿ ತುಂಬಿದಾಗ ಮಾತ್ರ ಕವಿತೆಗಳು ಮೂಡಿ ಭಾಷಿಕ ರೂಪವನ್ನು ಪಡೆದುಕೊಂಡು ಅರ್ಥಗಳು ಧ್ವನಿಸುವಂತೆ ಮಾಡುತ್ತವೆ ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಅದಮ್ಯ ಪ್ರೀತಿ, ಗಾಢವಾದ ಭಕ್ತಿ, ಕಠಿಣವಾದ ಕಷ್ಟ, ಅತೀವ ದುಃಖ, ಸಂತಸದ ಭಾವಗಳು ಮನದಲ್ಲಿ ತುಂಬಿದಾಗ ಮಾತ್ರ ಕವಿತೆಗಳು ಮೂಡಿ ಭಾಷಿಕ ರೂಪವನ್ನು ಪಡೆದುಕೊಂಡು ಅರ್ಥಗಳು ಧ್ವನಿಸುವಂತೆ ಮಾಡುತ್ತವೆ ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.

ತಾಲೂಕಿನ ಆಲದಹಳ್ಳಿ ಗ್ರಾಮದ ಚಿತ್ರಕಲಾವಿದ ಹೊನ್ನಪ್ಪನವರ ಚಿತ್ರ ಸಂಗ್ರಹಾಲಯದ ಆವರಣದಲ್ಲಿ ತಾಲೂಕು ಸಾಹಿತ್ಯ ಸಿಂಚನ ಬಳಗದ ವತಿಯಿಂದ ಉದಯೋನ್ಮುಖ ಕವಿಗಳಿಗಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಕವಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯವೆಂಬುದು ಸಾಗರಕ್ಕಿಂತ ಮಿಗಿಲಾದದ್ದು. ಜನಜೀವನದ ಸ್ಥಿತಿ ಬಿಂಬ, ಪ್ರತಿಬಿಂಬ, ಗತಿ ಬಿಂಬವಾಗಿದೆ. ಬದುಕಿನೊಳಗೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಎಲ್ಲರನ್ನು ಆಕರ್ಷಿಸಿ ಆನಂದ, ಹಿತವನ್ನುಂಟು ಮಾಡಿ ಮನವನ್ನು ಮುದಗೊಳಿಸುತ್ತದೆ. ಪ್ರತಿಯೊಬ್ಬರಲೂ ಕವಿತೆ, ಕಥೆ, ಕಾವ್ಯವಿದ್ದು ಅದನ್ನು ಅನಾವರಗೊಳಿಸುವ ಶಕ್ತಿಯನ್ನು ನೀವು ಬೆಳೆಸಿಕೊಳ್ಳಬೇಕು. ಇಂತಹ ಕವಿಗೋಷ್ಠಿಯಲ್ಲಿ ಹೆಚ್ಚೆಚ್ಚು ಯುವ ಕವಿಗಳು ಭಾಗವಹಿಸಿದರೆ ಕವಿತೆಗಳನ್ನು ಬರೆಯಲು ಸುಲಭವಾಗಲಿದೆ. ಇಲ್ಲಿ ಭಾಗವಹಿಸಿರುವ ಉದಯೋನ್ಮುಖ ಕವಿಗಳು ತಮ್ಮದೇ ರೀತಿಯಲ್ಲಿ ಭಿನ್ನ, ವಿಭಿನ್ನವಾಗಿ ಕವಿತೆಗಳನ್ನು ಬರೆದು ವಾಚಿಸಿದ್ದು ವಿಶೇಷವಾಗಿದೆ. ಮನುಷ್ಯನ ಬದುಕಿನ ಎಲ್ಲಾ ಆಯಾಮಗಳಲ್ಲಿ ಸಿಗಬಹುದಾದ ಮಧುರ ಸಂಬಂಧಗಳನ್ನು ಹಾಗೂ ನೋವು ನಲಿವುಗಳನ್ನು ತಮ್ಮ ಕವಿತೆಗಳ ಮೂಲಕ ಸಾಹಿತ್ಯ ಸಿಂಚನ ಮೂಡಿಸಿದ್ದು ಮುದ ನೀಡಿದೆ ಎಂದರು. ನಿವೃತ್ತ ಪ್ರಾಂಶುಪಾಲ ಶಿವಗಂಗಪ್ಪ ಮಾತನಾಡಿ, ಒಬ್ಬರಿಂದ ಒಬ್ಬರು ಪ್ರೇರಣೆ ಪಡೆದು ಸಾಹಿತ್ಯ ಕೃಷಿಗೆ ಮುಂದಾಗುತ್ತಾರೆ. ಮನದಲ್ಲಿ ಮೂಡಿದ್ದನ್ನು ಬರೆದು ನಿಧಾನವಾಗಿ ಅದಕ್ಕೊಂದು ರೂಪಕೊಟ್ಟು ಖಚಿತ ಪಡಿಸಿಕೊಂಡ ಮೇಲೆ ಕೃತಿಗಿಳಿಸಬೇಕು. ಹೋರಾಟದ ಹೆಜ್ಜೆ ಗುರುತುಗಳನ್ನು ಕವಿತೆಗಳ ಮೂಲಕ ಪರಿಣಾಮಕಾರಿಯಾಗಿ ಪ್ರತಿಧ್ವನಿಸುವಂತೆ ಮಾಡಬೇಕೆಂದರು. ಈ ಸಂದರ್ಭದಲ್ಲಿ ಶಿಕ್ಷಕ ರಮೇಶ್‌ರವರು 12ನೇ ಶತಮಾನದಿಂದ 21ನೇ ಶತಮಾನದ ನಡುವಿನ ಅಂತರದಲ್ಲಿ ಆಗಿರುವ ಬದಲಾವಣೆಗಳನ್ನು ಕುರಿತು ಕವಿತೆ ವಾಚನ ಮಾಡಿದ್ದು ಎಲ್ಲರ ಮನಮುಟ್ಟಿತು. ಪ್ರಕೃತಿ ಮಡಿಲಲ್ಲಿ ಸಾಹಿತ್ಯಾಸಕ್ತರಿಗೆ ರಸದೌತಣ ಉಣಬಡಿಸಿದ ಅಪರೂಪದ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮದಲ್ಲಿ ಸಾಹಿತ್ಯ ಸಿಂಚನ ಬಳಗದ ಮುಖ್ಯಸ್ಥ ದಿವಾಕರ್, ಶಿಕ್ಷಕ ರಮೇಶ್, ರಂಗಕಲಾವಿದ ಪರಮೇಶ್ವರಪ್ಪ, ಚಿತ್ರಕಲಾವಿದ ಹೊನ್ನಪ್ಪ ಆಲ್ದಹಳ್ಳಿ, ಸಿಂಚನ ಬಳಗದ ರವೀಶ್, ಕಸಾಪ ಮಂಜಪ್ಪ, ಉದಯೋನ್ಮುಖ ಕವಿಗಳಾದ ಕಾತ್ಯಾಯಿನಿ, ನವೀನ್, ಸ.ಬ.ರವೀಶ್, ಪ್ರಭುಸ್ವಾಮಿ, ಓಂಕಾರೇಶ್, ಬಾಣಸಂದ್ರರವೀಶ್, ಲಿಂಗೇಶ್ ಮತ್ತಿತರರಿದ್ದರು. ಬಾಕ್ಸ್‌..

ಸಾಹಿತ್ಯ ಹೊರಹೊಮ್ಮಲು ಇಂತಹುದೇ ದಿನ ಗಳಿಗೆ ಅಂತೇನು ಇರುವುದಿಲ್ಲ. ಕವಿ ಹೃದಯ ಇರುವ ಪ್ರತಿಯೊಬ್ಬರು ಸಹ ತಮ್ಮ ಮಗ್ಗಲುಗಳಲ್ಲಿ ನಡೆಯುವ ಘಟನೆಗಳಿಗೆ ಸ್ಪಂದಿಸುವ ರೀತಿಯ ಮೇಲೆ ಕವಿಯ ಜನನವಾಗುತ್ತದೆ. ಒಂದು ಸಲ ಕವಿ ಜನನವಾದರೆ ಆತನಿಗೆ ಮರಣ ಇರುವುದಿಲ್ಲ. ಬರೆಯುವ ಹಾಗೂ ಆಸ್ವಾದಿಸುವ ಪ್ರೌಢಿಮೆಯನ್ನು ಬೆಳೆಸಿಕೊಂಡಾಗ ಮಾತ್ರ ಹೊಸ ಕವಿತೆಗಳು, ಸಾಹಿತ್ಯ ಸೃಷ್ಠಿಯಾಗಲು ಸಾಧ್ಯ. ಆದ್ದರಿಂದ ಯುವಜನರು ಮೊದಲು ಸಾಹಿತ್ಯ ಓದುವುದರ ಜೊತೆಗೆ ತಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ರೂಪ ನೀಡಬೇಕು. - ದಿವಾಕರ್, ಮುಖ್ಯಸ್ಥರು, ಸಾಹಿತ್ಯ ಸಿಂಚನ ಬಳಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ