ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆನ್ನಓಬಳಯ್ಯ ನಿಧನ

KannadaprabhaNewsNetwork |  
Published : Nov 04, 2025, 12:00 AM IST
ಪೆನ್ನ ಓಬಳಯ್ಯ. | Kannada Prabha

ಸಾರಾಂಶ

ಶನಿವಾರವಷ್ಟೇ ಪೆನ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಪೆನ್ನ ಓಬಳಯ್ಯ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸೋಮವಾರ ಮಧ್ಯಾಹ್ನ ಸಿಂಪಾಡಿಪುರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ತಾಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಭಾನುವಾರ ತಡರಾತ್ರಿ ನಿಧನರಾಗದ್ದಾರೆ.

ಶನಿವಾರವಷ್ಟೇ ಪೆನ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಪೆನ್ನ ಓಬಳಯ್ಯ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸೋಮವಾರ ಮಧ್ಯಾಹ್ನ ಸಿಂಪಾಡಿಪುರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆಯನ್ನು ಆರಂಭಿಸಿದ್ದ ಅವರು ಐದಾರು ದಶಕಗಳಿಂದ ವೀಣೆ ತಯಾರಿಸುತ್ತಿದ್ದು, ತಮ್ಮ ಗ್ರಾಮದ ಇತರ ಆಸಕ್ತರಿಗೂ ವೀಣೆ ತಯಾರಿಕೆ ಕೌಶಲವನ್ನು ಕಲಿಸಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಸಿಂಪಾಡಿಪುರ ವೀಣೆಗಳು ತಯಾರಾಗುವ ಕರ್ನಾಟಕದ ಏಕೈಕ ಊರಾಗಿದ್ದು, ಇಲ್ಲಿ ತಯಾರಾಗುವ ವೀಣೆಗಳು ರಾಜ್ಯ, ಹೊರರಾಜ್ಯಗಳ ಸಂಗೀತಗಾರರ ಕೈಸೇರಿವೆ. ತಂಜಾವೂರಿನ ವೀಣೆಗಳಿಗೆ ಇಲ್ಲದ ಕೆಲ ವಿಶೇಷತೆಗಳು ಸಿಂಪಾಡಿಪುರದ ವೀಣೆಗಳಿಗಿವೆ ಎನ್ನುತ್ತಾರೆ ಸಂಗೀತಾಸಕ್ತರು.

ಮುಖ್ಯಮಂತ್ರಿ ನುಡಿನಮನ:

ಪೆನ್ನ ಓಬಳಯ್ಯ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ನಿಧನ ಅತೀವ ದುಃಖ ತಂದಿದೆ. ಸಿಂಪಾಡಿಪುರದ ನಿವಾಸಿಯಾಗಿದ್ದ ಓಬಳಯ್ಯ ಅವರು ಇಡೀ ದೇಶಕ್ಕೆ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದವರು. ಜೊತೆಗೆ ಆಸಕ್ತರಿಗೆ ವೀಣೆ ತಯಾರಿಕೆಯ ಕೌಶಲ್ಯವನ್ನು ಕಲಿಸಿ, ಸಾಂಪ್ರದಾಯಿಕ ಸಾಹಿತ್ಯದ ನಿರಂತರತೆಯನ್ನು ಕಾಪಾಡುವಲ್ಲಿ ಶ್ರಮಿಸಿದ್ದರು. ಹಿರಿಯ ಜೀವ ಓಬಳಯ್ಯನವರ ಅಗಲಿಕೆಯಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ‌ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಂಸ್ಕೃತಿ ಇಲಾಖೆ ಸಚಿವರಿಂದ ಸಂತಾಪ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, 103 ವರ್ಷದ ಪೆನ್ನ ಓಬಳಯ್ಯ ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಲು ಬಂದ ಪೆನ್ನ ಓಬಳಯ್ಯ ಅಸ್ವಸ್ಥರಾಗಿದ್ದರು. ಅವರ ಪರವಾಗಿ ಅವರ ಮಕ್ಕಳು ಪ್ರಶಸ್ತಿ ಸ್ವೀಕಾರ ಮಾಡಿದ್ದರು. ದೊಡ್ಡಬಳ್ಳಾಪುರ ತಾಲೂಕಿನ ಸಿಂಪಾಡಿಪುರದ ನಿವಾಸಿಯಾಗಿದ್ದ ಅವರು ಇಡೀ ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದರು. ಅವರಿಂದ ನೂರಾರು ಜನ ವೀಣೆ ತಯಾರಿಸುವುದನ್ನು ಕಲಿತಿದ್ದಾರೆ.ಪ್ರಶಸ್ತಿ ಪಡೆದ ಮರುದಿನವೇ ಅವರು ದೈವಾಧೀನರಾಗಿರುವುದು ದುರಾದೃಷ್ಟಕರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸಿಂಪಾಡಿಪುರದ ಹೆಸರನ್ನು ತಮ ವೀಣೆಗಳ ಮೂಲಕ ರಾಷ್ಟ್ರಕ್ಕೆ ಪರಿಚಯಿಸಿದ ಪೆನ್ನ ಓಬಳಯ್ಯ ಅವರ ಸಾಂಸ್ಕೃತಿಕ ಸೇವೆಯನ್ನು ನೆನೆಯುತ್ತಾ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಪೆನ್ನ ಓಬಳಯ್ಯ ಅವರ ನಿಧನಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಕಲಾವಿದರು, ಸಂಗೀತಾಸಕ್ತರು ನುಡಿನಮನ ಸಲ್ಲಿಸಿದ್ದಾರೆ.

ಫೋಟೋ-3ಕೆಡಿಬಿಪಿ1- ಪೆನ್ನ ಓಬಳಯ್ಯ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ