ಕನ್ನಡಪ್ರಭ ವಾರ್ತೆ ಮಂಡ್ಯ
ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರಿಗೆ ನಾಚಿಕೆಯಾಗಬೇಕು. ಇದೊಂದು ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮ. ಸಮಾಜದ ಎಲ್ಲ ವರ್ಗದ ಜನರಿಗೆ ಯೋಜನೆಯ ಫಲ ಸಿಗುತ್ತಿದೆ. ಓಟಿಗಾಗಿ ಇವುಗಳನ್ನು ಕೊಡುತ್ತಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಉತ್ಸವ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜನರು ವಿಪಕ್ಷದವರು ಹೇಳುವುದನ್ನೆಲ್ಲಾ ಸತ್ಯವೆಂದು ಭಾವಿಸಬಾರದು. ಯಾವ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಜನರಿಗೆ ಏನೆಲ್ಲಾ ಕೊಡುಗೆ ನೀಡಿದೆ ಎಂಬುದನ್ನು ಸ್ವತಂತ್ರವಾಗಿ ಆಲೋಚಿಸಿ ತೀರ್ಮಾನ ಮಾಡಬೇಕು ಎಂದರು.
ಯಾವುದೋ ಒಂದು ಸಮುದಾಯಕ್ಕೋ, ಒಂದು ಜಾತಿಗೆ ಸೀಮಿತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ ಅಥವಾ ಓಟಿಗೆ ಸೀಮಿತವಾಗಿ ಇವುಗಳನ್ನೆಲ್ಲಾ ಕೊಡುತ್ತಿಲ್ಲ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉದ್ದೇಶದಿಂದ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಗ್ಯಾರಂಟಿ ಯೋಜನೆಗಳಿಗಷ್ಟೇ ಸರ್ಕಾರ ಸೀಮಿತವಾಗಿಲ್ಲ. ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ೫೦ ಕೋಟಿ ರು. ನೀಡಲಾಗಿದೆ. ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಸರ್ಕಾರಿ ನೌಕರರ ವೇತನ, ಪಿಂಚಣಿಗಳು ನಿಂತಿಲ್ಲ. ಎಲ್ಲವನ್ನೂ ಸಮಯೋಚಿತವಾಗಿ ನೀಡಿಕೊಂಡು ಬರಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸಹಿಸಲಾಗದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂಷಿಸಿದರು.ಮಹಿಳೆಯರು ಶೇ.೫೦ರಷ್ಟಿದ್ದಾರೆ. ಅವರು ಸ್ವತಂತ್ರವಾಗಿ ಆಲೋಚನೆ ಮಾಡುವಷ್ಟು ಸಮರ್ಥರಿದ್ದಾರೆ. ಬೇರೆಯವರು ಹೇಳಿದ್ದನ್ನು ವೇದವಾಕ್ಯವೆಂದು ಭಾವಿಸದೆ ಯಾರಿಗೆ ಸರ್ಕಾರ ಆರ್ಥಿಕ ಬಲ ನೀಡುತ್ತಿದೆ. ಯಾರ ಬದುಕನ್ನು ರಕ್ಷಣೆ ಮಾಡುತ್ತಿದೆ. ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ ಎಂಬುದನ್ನು ವಿವೇಚನೆ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ವಿಪಕ್ಷಗಳ ಮಾತಿಗೆ ಯಾರೂ ಕಿವಿಗೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ನಿರತವಾಗಿದೆ. ಪ್ರತಿ ತಿಂಗಳು ೫೦ ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಾಗಿಟ್ಟಿದೆ. ಇದರ ಬಗ್ಗೆ ಜನರಿಗೆ ಉಪಕಾರ ಸ್ಮರಣೆ ಇರಬೇಕು ಎಂದರು.ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ಪ್ರಗತಿ ಕುಂಠಿತವಾಗಿದೆ ಎಂಬುದೆಲ್ಲಾ ಬರೀ ಸುಳ್ಳು. ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುವುದರ ಜೊತೆಗೆ ಬಡವರಿಗೆ ನೆರವಾಗುತ್ತಿದೆ. ಮಂಡ್ಯ ಕ್ಷೇತ್ರ ಸೇರಿದಂತೆ ಏಳೂ ಕ್ಷೇತ್ರಗಳಿಗೂ ತಲಾ ಒಂದೊಂದು ಸಾವಿರ ಕೋಟಿ ರು. ಹಣ ಬಂದಿದೆ. ರಸ್ತೆಗಳು, ಚರಂಡಿಗಳು, ಹೊಸ ವಿಶ್ವವಿದ್ಯಾಲಯಗಳು, ಮೈಷುಗರ್ ಕಾರ್ಖಾನೆ, ನೀರಾವರಿ ಯೋಜನೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಹಣ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಯಿಂದ ಬಂದ ಹಣದ ಜೊತೆಗೆ ಸ್ವಂತ ಹಣ ಸೇರಿಸಿ ಸರ್ಕಾರಿ ಶಾಲೆಗೆ ಆರ್‌ಓ ಪ್ಲಾಂಟ್ ಸ್ಥಾಪಿಸಿದ ಬಾಬುರಾಯನಕೊಪ್ಪಲು ಗ್ರಾಮದ ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಸೂರಜ್ ಹೆಗ್ಗಡೆ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಹೀಂ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಇತರರಿದ್ದರು.