ಕನ್ನಡಪ್ರಭ ವಾರ್ತೆ ಕೊರಟಗೆರೆ
ಇತ್ತೀಚೆಗೆ ನಡೆದ ಅಂಧ ಮಹಿಳಾ ಟಿ- ೨೦ ವಿಶ್ವಕಪ್ ಗೆದ್ದು ಸಾಧನೆಗೈದ ಭಾರತೀಯ ತಂಡದ ಆಟಗಾರ್ತಿ ಕಾವ್ಯ ಅವರಿಗೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಪಂ ಹಾಗೂ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಮಂಜುನಾಥ್ ಹಾಗೂ ಇಒ ಅಪೂರ್ವ ಅವರು ಸನ್ಮಾನಿಸಿ ಗೌರವಿಸಿದರು.ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರ ಹೋಬಳಿಯ ನಾಯಕನಪಾಳ್ಯ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಕಾವ್ಯ ದೇಶವೇ ಮೆಚ್ಚುವಂಥ ಸಾಧನೆ ಮಾಡಿದ್ದಾರೆ. ವಿಶೇಷಚೇತನರಾಗಿದ್ದರೂ ಸಹ ನಾವೂ ಕೂಡ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಮಹಿಳೆಯರು ಹಾಗೂ ಇವತ್ತಿನ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಇಬ್ಬರು ವಿಶೇಷಚೇತನರು ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳನ್ನು ಗುರುತಿಸುವುದು ನಮ್ಮ ಕರ್ತವ್ಯ. ಮ್ಯಾರಥಾನ್, ಹಾಕಿ ಸೇರಿ ಇನ್ನಿತರೆ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇವರು ಇನ್ನಷ್ಟು ಅವಕಾಶಗಳು ದೊರೆತು ದೊಡ್ಡ ಸಾಧನೆ ಮಾಡಲಿ. ನಾನು ಕೂಡ ಇವರಿಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಹೇಳಿದರು.ವಿಶೇಷಚೇತನ ಮಹಿಳಾ ಟಿ- ೨೦ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿ ಕಾವ್ಯ ಮಾತನಾಡಿ, ನಾನು ಆರು ವರ್ಷ ಇರುವಾಗ ನಮ್ಮ ತಂದೆ ಕೂಲಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದೆ, ಆ ವೇಳೆ ಯಾರಿಂದಲೋ ಆಕಸ್ಮಿಕವಾಗಿ ಕಲ್ಲೊಂದು ನನ್ನ ಕಣ್ಣಿಗೆ ತಾಗಿ ಕಣ್ಣಿನ ಸಮಸ್ಯೆಯಾಗಿತ್ತು. ಇದರಿಂದ ನನ್ನ ಒಂದು ಕಣ್ಣು ದೃಷ್ಟಿ ಕಳೆದುಕೊಂಡಾಗ ಬಡತನದಲ್ಲಿದ್ದ ನನ್ನ ತಂದೆಗೆ ಆಸ್ಪತ್ರೆಗೆ ತೋರಿಸಲು ಸಹ ಶಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೆಂಗಳೂರಿನ ಸಮಸ್ತಂ ಸಂಸ್ಥೆಯು ನನಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಟ್ಟಿರುವ ಕಾರಣ ಇಂದು ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಗ್ರಾಪಂ ಅಧ್ಯಕ್ಷ ಸಿ.ಡಿ.ಪ್ರಭಾಕರ್ ಮಾತನಾಡಿ, ಸಹೋದರಿ ಕಾವ್ಯ ಅವರ ತಂದೆ ನನ್ನ ಬಾಲ್ಯ ಸ್ನೇಹಿತ. ಇವರ ಮಗಳ ಸಾಧನೆ ಕಂಡು ನನಗೆ ತುಂಬಾ ಖುಷಿ ಆಯಿತು. ನಮ್ಮ ಗ್ರಾಮದ ಪಕ್ಕದವರೇ ಆದ ಕಾವ್ಯ ಅವರ ಸಾಧನೆ ಕಂಡು ನಮ್ಮ ಮನೆಯ ಮಗಳು ಸಾಧನೆ ಮಾಡಿದಷ್ಟು ಸಂತಸವಾಯಿತು. ಇಂತಹ ಸಾಧನೆಗಳು ನಮ್ಮ ಕಾವ್ಯ ಅವರಿಗೆ ಇನ್ನಷ್ಟು ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಅವರ ಸಾಧನೆಗೆ ನಮ್ಮ ಗ್ರಾಪಂ ಹಾಗೂ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು ಎಂದು ತಿಳಿಸಿದರು.ತಾಪಂ ಇಒ ಅಪೂರ್ವ, ಪಿಡಿಒ ರಂಗನಾಥ್, ಕಾರ್ಯದರ್ಶಿ ಮುನಿಯಯ್ಯ, ಮುಖಂಡರಾದ ಮಂಜುನಾಥ್, ರಾಮಚಂದ್ರಯ್ಯ, ಪುಟ್ಟಹನುಮಂತರಾಯಪ್ಪ, ಚಿಕ್ಕರಂಗಯ್ಯ, ಲಕ್ಷ್ಮೀಪತಿ, ಕಮಲಮ್ಮ, ಏರ್‌ಟೆಲ್‌ಗೋಪಿ, ಶಕ್ತಿ, ರಮೇಶ್, ಹರ್ಷ ಸೇರಿದಂತೆ ಇತರರು ಇದ್ದರು.