ಕನ್ನಡಪ್ರಭ ವಾರ್ತೆ ಹನೂರು
ದಂಟಳ್ಳಿ ಏತ ನೀರಾವರಿ ಯೋಜನೆಗೆ ಜ. 15 ರೊಳಗೆ ಡಿಪಿಆರ್ ಮಾಡಿ ಅನುಮತಿ ನೀಡಿ ಜಾರಿಗೆ ತರಲಾಗುವುದು. ಅಲ್ಲಿವರೆಗೂ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ತಿಳಿಸಿದರು.ತಾಲೂಕಿನ ವಡಕೆ ಹಳ್ಳ ಗ್ರಾಮದಲ್ಲಿ ಕಳೆದ 36 ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ರೈತರ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರನ್ನು ಉದ್ದೇಶಿಸಿ ಮಾತನಾಡಿದರು.ದಂಟಳ್ಳಿ ಏತ ನೀರಾವರಿ ಯೋಜನೆಗೆ ಈಗಾಗಲೇ ಡಿಪಿಆರ್ ಕ್ರಿಯೆ ಯೋಜನೆಯನ್ನು ಕಾರ್ಯರೂಪದಲ್ಲಿ ಮಾಡಲಾಗುತ್ತಿದ್ದು, ಪ್ರಸ್ತುತ ಯಾವ ಹಂತದಲ್ಲಿದೆ ಎಂಬುದನ್ನು ನಿಮಗೆ ಶುಕ್ರವಾರ ಅಂದರೆ ನಾಳೆ ತಿಳಿಸುತ್ತೇನೆ. ಜೊತೆಗೆ ಜ. 15ರ ಒಳಗಡೆ ಡಿಪಿಆರ್ ಸಂಪೂರ್ಣ ಮಾಡಲಾಗುವುದು. ಅಲ್ಲಿಯವರೆಗೆ ರೈತ ಬಂಧುಗಳು ಅಹೋ ರಾತ್ರಿ ಧರಣಿಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ನಂತರ ರೈತ ಮಹಿಳೆಯರು ಮಾತನಾಡಿ, ದಂಟಳ್ಳಿ ಏತ ನೀರಾವರಿ ಯೋಜನೆಯು ಡಿಪಿಆರ್ ಸಂಪೂರ್ಣ ಮುಗಿದು ತಾವು ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವವರೆಗೂ ಸಹ ನಮ್ಮ ಈ ಅಹೋರಾತ್ರಿ ಧರಣಿ ಮುಂದುವರೆಯಲಿದೆ. ಹಾಗಾಗಿ ಆದಷ್ಟು ಬೇಗ ತಾವು ಡಿಪಿಆರ್ ಯೋಜನೆಯನ್ನು ಸಕ್ರಿಯವಾಗಿ ಮುಗಿಸಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಬೇಕು ಎಂದು ಮತ್ತೊಮ್ಮೆ ಮನವಿಯನ್ನು ಮಾಡಿದರು.ಕುಡಿಯಲು ನೀರು ಯೋಗ್ಯವಾಗಿಲ್ಲ:
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಮಿಶ್ರಿತ ನೀರು ಸಿಗುತ್ತಿದೆ. ಇದರಿಂದ ಸಾಕಷ್ಟು ರೋಗ ರುಜಿನಗಳಿಗೆ ಇಂದಿನ ಜನ ತುತ್ತಾಗುತ್ತಿದ್ದಾರೆ. ಈ ಭಾಗದಲ್ಲಿ ಕುಡಿಯಲು ನೀರು ಯೋಗ್ಯವಾಗಿಲ್ಲ ಎಂದು ಅಧಿಕಾರಿಗಳೇ ತಿಳಿಸಿರುತ್ತಾರೆ. ಹಾಗಾಗಿ ಕುಡಿಯಲು ಯೋಗ್ಯವಾದ ನೀರನ್ನು ಕೊಡುವ ಸಾಮಾಜಿಕ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನೆರವಿದ್ದ ರೈತ ಮಹಿಳೆಯರು ಒತ್ತಾಯ ಮಾಡಿದರು.ಕೆರೆ ಹೂಳು ತೆಗೆಸಿ:ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವಂತಹ ಹಾಲೇರಿ ಕೆರೆ, ಕೀರೆ ಪಾತಿ ಕೆರೆ, ಹೂಳು ತುಂಬಿದ್ದು ನೀರು ಸಂಗ್ರಹಣೆಯ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಹಾಗಾಗಿ ಬಿದ್ದಂತಹ ಮಳೆ ನೀರನ್ನು ಶೇಖರಣೆ ಮಾಡಲು ಇರುವ ಕೆರೆಗಳಲ್ಲಿ ಸದ್ಯ ಹೂಳು ತೆಗೆಸಬೇಕು ಎಂದರು.ಇದೇ ವೇಳೆ ಹನೂರು ತಹಸೀಲ್ದಾರ್ ಚೈತ್ರ ಹಾಗೂ ರೈತ ಮಹಿಳೆಯರು ಹಾಗೂ ರೈತ ಮುಖಂಡರು ಇದ್ದರು.-----------
4ಸಿಎಚ್‌ಎನ್55ಹನೂರು ತಾಲೂಕಿನ ವಡಕೆ ಹಳ್ಳ ಗ್ರಾಮದಲ್ಲಿ ಕಳೆದ 36 ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ರೈತರ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭೇಟಿ ನೀಡಿ ಮಾತನಾಡಿದರು.
-----------