ವಿಜೃಂಭಣೆಯ ಶ್ರೀರಾಮಲಲ್ಲಾ ಭಾವಚಿತ್ರದ ಮೆರವಣಿಗೆ

KannadaprabhaNewsNetwork | Published : Jan 23, 2024 1:46 AM

ಸಾರಾಂಶ

ಶಹಾಪುರ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕೇಸರಿ ಧ್ವಜಗಳು, ಬ್ಯಾನರ್, ಬಂಟಿಂಗ್ಸ್‌ಗಳಿಂದ ಅಲಂಕಾರಗೊಂಡು ಶ್ರೀರಾಮನ ಪ್ರತಿಷ್ಠಾಪನೆಗೆ ಮೆರಗು ನೀಡಿದವು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರ ಹಾಗೂ ತಾಲೂಕಿನ ಸಗರ, ದೋರನಹಳ್ಳಿ, ಚಾಮನಾಳ ಗೋಗಿ, ಗ್ರಾಮ ಸೇರಿ ವಿವಿಧಡೆ ಮಠ-ಮಂದಿರಗಳಲ್ಲಿ ಅಯ್ಯೋಧ್ಯೆ ರಾಮ ಮಂದಿರದಲ್ಲಿ ನಡೆಯುತ್ತಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ವಿಶೇಷ ಪೂಜಾ ಕೈಂಕರ್ಯ ಮಾಡುವುದರ ಜತೆಗೆ ಶ್ರೀರಾಮನ ಭಾವಚಿತ್ರದ ಮೆರವಣಿಗೆಯನ್ನು ತುಂಬು ಕುಂಭ ಮೇಳದೊಂದಿಗೆ ಬಾಜಾ ಭಜಂತ್ರಿ ಮೂಲಕ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೇಸರಿ ಧ್ವಜಗಳು, ಬ್ಯಾನರ್ ಹಾಗೂ ಪರಾರಿಗಳು ರಾರಾಜಿಸಿ ಎಲ್ಲೆಲ್ಲೂ ಕೇಸರಿಮಾಯವಾಗಿ ತೋರ್ಪಟ್ಟಿತು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ, ಶ್ರೀ ರಾಮ್ ಜೈ ರಾಮ್, ಜೈ ಜೈ ರಾಮ್ ಘೋಷಣೆ ಕೂಗುವುದು ವಿಶೇಷವಾಗಿತ್ತು.

ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನ ಕಾರ್ಯ ಮುಗಿಯುತಿದ್ದಂತೆ ಯುವಕರು, ಮಧ್ಯ ವಯಸ್ಸಿನವರು ಹಾಗೂ ವೃದ್ಧರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿ ಜೈಕಾರ ಹಾಕಿದರು.

ನಗರದ ಹೃದಯ ಭಾಗದಲ್ಲಿರುವ ಹನುಮಾನ್ ದೇವಾಲಯದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೇರ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೊಡ್ಡದಾದ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂ ಕಾರ್ಯಕರ್ತರು ಹಾಗೂ ಭಕ್ತರ ವತಿಯಿಂದ ನೆರದಿದ್ದ ಸಾವಿರಾರು ಜನರಿಗೆ ಶಿರಾ, ಅನ್ನ, ಸಾಂಬಾರ್, ಚಿತ್ರಾನ್ನದ ಪ್ರಸಾದ ವ್ಯವಸ್ಥೆಯನ್ನು ನಗರದ ಹನುಮಾನ್ ದೇವಾಲಯ, ಬಸವೇಶ್ವರ ವೃತ್ತ, ಹಳಿ ಸಗರ, ಅರಳಿ ಕಟ್ಟೆ ಆಂಜನೇಯ, ಸಗರ ಗ್ರಾಮದ ಹನುಮಾನ್ ಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಬಹುವರ್ಷಗಳ ಹಿಂದೂಗಳ ಕನಸು ನನಸಾಗಿದ್ದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಇಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಿರ್ವಿಘ್ನವಾಗಿ ನೆರವೇರಿತು. ಇಡೀ ದೇಶ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಅಮೀನ್ ರೆಡ್ಡಿ ಯಾಳಗಿ, ಬಿಜೆಪಿ ಜಿಲ್ಲಾಧ್ಯಕ್ಷರು.

ದೇಶದ ಶತಕೋಟಿ ರಾಮನ ಭಕ್ತರು ಸಾವಿರಾರು ವರ್ಷಗಳಿಂದ ಕಂಡಿದ್ದ ಕನಸು ಇಂದು ನನಸಾಗಿದೆ. ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಿರ್ವಿಘ್ನವಾಗಿ ಸಂಪನ್ನಗೊಂಡಿದ್ದು, ಭಗವಾನ್‌ ಶ್ರೀರಾಮನು ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ರಕ್ಷಣೆಗಾಗಿ ನೆಲೆ ನಿಂತಿದ್ದಾನೆ.

ಸೋಮಶೇಖರಯ್ಯ ಹಿರೇಮಠ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ.

Share this article