ಜಿಲ್ಲೆ ಮಹಿಳಾ ಮತದಾರರ ಸಂಖ್ಯೆ ಗಣನೀಯ ಏರಿಕೆ

KannadaprabhaNewsNetwork | Published : Jan 23, 2024 1:46 AM

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಈವರೆಗೆ ನೋಂದಣಿ ಆಗಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿದ್ದಾರೆ. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಡಾ. ಆರ್.ಸೆಲ್ವಮಣಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಮತದಾರರ ಸಂಖ್ಯೆಯನ್ನು ಗಮನಿಸಿದಾಗ 20,500 ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಈವರೆಗೆ ನೋಂದಣಿ ಆಗಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಪ್ರಸ್ತುತ ಜಿಲ್ಲೆಯ ಏಳು ತಾಲೂಕುಗಳ ವ್ಯಾಪ್ತಿಯಲ್ಲಿ 1793 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7,31,779 ಪುರುಷ, 7,51,159 ಮಹಿಳೆಯರು ಸೇರಿದಂತೆ ಒಟ್ಟು 14,82,938 ಮತದಾರರು ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಮತದಾರರ ಸಂಖ್ಯೆಯನ್ನು ಗಮನಿಸಿದಾಗ 20,500 ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 249ಮತಗಟ್ಟೆಗಳಿದ್ದು, 1,06,200 ಪುರುಷ, 1,08,433ಮಹಿಳೆಯರು ಸೇರಿದಂತೆ ಒಟ್ಟು 2,14,633 ಮತದಾರರು, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳಿದ್ದು, 103183 ಪುರುಷ, 1,09,587 ಮಹಿಳೆಯರು ಸೇರಿದಂತೆ ಒಟ್ಟು 2,12,770 ಮತದಾರರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 288 ಮತಗಟ್ಟೆಗಳಿದ್ದು, 129019 ಪುರುಷ, 135700 ಮಹಿಳೆಯರು ಸೇರಿದಂತೆ ಒಟ್ಟು 2,64,719 ಮತದಾರರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 258 ಮತಗಟ್ಟೆಗಳಿದ್ದು, 92,921 ಪುರುಷ, 95,640 ಮಹಿಳೆಯರು ಸೇರಿದಂತೆ ಒಟ್ಟು 1,88,561 ಮತದಾರರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ 235 ಮತಗಟ್ಟೆಗಳಿದ್ದು, 100456 ಪುರುಷ, 1,00,212 ಮಹಿಳೆಯರು ಸೇರಿದಂತೆ ಒಟ್ಟು 2,00,668 ಮತದಾರರು, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 239 ಮತಗಟ್ಟೆಗಳಿದ್ದು, 98,147 ಪುರುಷ, 97260 ಮಹಿಳೆಯರು ಸೇರಿದಂತೆ ಒಟ್ಟು 1,95,407 ಮತದಾರರು ಹಾಗೂ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 271 ಮತಗಟ್ಟೆಗಳಿದ್ದು, 101853 ಪುರುಷರು, 104327 ಮಹಿಳೆಯರು ಸೇರಿದಂತೆ ಒಟ್ಟು 2,06,180 ಮತದಾರರಿದ್ದಾರೆ ಎಂದು ವಿವರಿಸಿದರು. ಪ್ರಸ್ತುತ ಸಂದರ್ಭದಲ್ಲಿ ಕಳೆದ ಚುನಾವಣೆಯಲ್ಲಿ 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗಳೊಂದಿಗೆ ಮತದಾರರ ಸಂಖ್ಯೆಯಲ್ಲಿ ಆಗಿರಬಹುದಾದ ಹೆಚ್ಚಳ, ಹಳೇ ಕಟ್ಟಡಗಳ ಬದಲಾವಣೆ, ಖಾಸಗಿ ಕಟ್ಟಡ ಹಾಗೂ ಹಲವು ಕಾರಣಗಳಿಗಾಗಿ 19 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರ 3ಜನರನ್ನು ಒಳಗೊಂಡು 18ರಿಂದ 19 ವರ್ಷ ವಯೋಮಿತಿಯೊಳಗಿನ 27,118 ಮತದಾರರು, ಲಿಂಗತ್ವ ಅಲ್ಪಸಂಖ್ಯಾತರ 25 ಮಂದಿ ಸೇರಿ 20ರಿಂದ 29 ವರ್ಷ ವಯೋಮಿತಿಯೊಳಗಿನ 14,26,240 ಮತದಾರರು, 80ರಿಂದ 99 ವರ್ಷ ವಯೋಮಿತಿಯೊಳಗಿನ 29,327 ಮತದಾರರು ಹಾಗೂ 100 ವರ್ಷ ಮೇಲ್ಪಟ್ಟ ವಯೋಮಿತಿಯ 253 ಮಂದಿ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ ವಯೋಮಿತಿಯ ಮತದಾರರು ಹಾಗೂ ವಿಕಲಚೇತನರು ನಿಯಮಾನುಸಾರ ಕೋರಿಕೆ ಸಲ್ಲಿಸಿದಲ್ಲಿ ಅವರಿರುವಲ್ಲಿಯೇ ಮತದಾನಕ್ಕೆ ಅವಕಾಶ ಒದಗಿಸಲಾಗುವುದು. ಕಳೆದ ಸಾಲಿನಲ್ಲಿ ಸುಮಾರು 5,000ಕ್ಕೂ ಹೆಚ್ಚಿನ ಮತದಾರರು ಈ ಸೌಲಭ್ಯವನ್ನು ಬಳಸಿಕೊಂಡಿದ್ದರು ಎಂದು ತಿಳಿಸಿದರು.

ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಕಚೇರಿಗೆ, ಮತಗಟ್ಟೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ, ಅಥವಾ ಮತದಾರರೇ ನೇರವಾಗಿ ಜಾಲತಾಣ: http://www.nvsp.in ಮತ್ತು http://voterportal.eci.gov.in marte voter Helpline App ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ತಾಲೂಕು ಚುನಾವಣಾ ತಹಸೀಲ್ದಾರ್ ಮಂಜುನಾಥ್, ಸಂತೋಷ್ ಸೇರಿದಂತೆ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

- - - -22ಎಸ್‌ಎಂಜಿಕೆಪಿ01:

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಮಾತನಾಡಿದರು.

Share this article