ಕನ್ನಡಪ್ರಭ ವಾರ್ತೆ ಕೊಡೇಕಲ್
ರಾಮನ ಆದರ್ಶಗಳು ಮತ್ತು ಮೌಲ್ಯಗಳು ಜಗತ್ತಿಗೆ ಸ್ಪೂರ್ತಿಯ ದೀರ್ಘಕಾಲಿಕ ಮೂಲವಾಗಿ ಉಳಿಯುತ್ತದೆ. ಮಾನವ ಕುಲಕ್ಕೆ ಆದರ್ಶ ಪುರುಷನಾದ ಶ್ರೀರಾಮಚಂದ್ರನ ಜೀವನ ಮಾರ್ಗ ನಡೆದ ಹಾದಿ ಆತನ ಗುಣ ಇಂದಿಗೂ ಆದರ್ಶನೀಯವಾದದ್ದು, ಭಗವಂತನಾದರೂ ಸಹಿತ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗ ತೋರಿಸಿದ ಮಹಾಪುರುಷ ಶ್ರೀರಾಮ ಎಂದು ಮಾಜಿ ಸಚಿವರಾದ ರಾಜೂಗೌಡ ಹೇಳಿದರು.ಪಟ್ಟಣದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಬಾಲ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ಮತ್ತು ದೈವಿಕ ದೇವಾಲಯದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯು ಸುದೀರ್ಘ ಹೋರಾಟ, ತ್ಯಾಗ, ಬಲಿದಾನಗಳ ಬಳಿಕ ಶತಮಾನಗಳ ಕನಸು ನನಸಾಗುವ ಶತಕೋಟಿ ಭಾರತೀಯರ ಅವಿಸ್ಮರಣೀಯ ಕ್ಷಣವಾಗಿದೆ ಎಂದರು.
ಶ್ರೀರಾಮನ ಭವ್ಯ ಶೋಭಯಾತ್ರೆ:ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಕೊಡೇಕಲ್ ಗ್ರಾಮದ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವೃಷಬೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ನೀಲಕಂಠ ಸ್ವಾಮೀಜಿ, ದಾವಲ ಮಲಿಕ್ ಧರ್ಮದರ್ಶಿ, ಹಾಗೂ ರಾಜಾ ಜಿತೇಂದ್ರನಾಯಕ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ಶಿವಶಂಕರ ಯಡಹಳ್ಳಿ ಅವರು ಶೋಭಯಾತ್ರೆಗೆ ಪೂಜೆ ಸಲ್ಲಿಸಿ ಚಾಲನೆಗೊಳಿಸಿದರು.
ವಾಲ್ಮೀಕಿ ದೇವಸ್ಥಾನದಿಂದ ಕಾಲಜ್ಞಾನಿ ಪ್ಯಾಟಿ ಬಸವೇಶ್ವರ ದೇವಸ್ಥಾನದ ವರೆಗೆ ಶೋಭಯಾತ್ರೆಯೂ ಡೊಳ್ಳು ಕುಣಿತದೊಂದಿಗೆ ಸಾಗಿತು. ರಾಮನ ಭಕ್ತಿ ಗೀತೆಗಳು ಹಾಗೂ ರಾಮನಾಮಕ್ಕೆ ಯುವಕರು ಸೇರಿ ರಾಮಾಯಣ ಛಧ್ಮ ವೇಷಧಾರಿಗಳು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆಯನ್ನು ಮಾಡಿದರು.ಶೋಭಯಾತ್ರೆ ಸಾಗುವ ದಾರಿಯೂದ್ದಕ್ಕೂ ಮಹಿಳೆಯರು ರಂಗೋಲಿ ಹಾಕುವ ಮೂಲಕ ರಸ್ತೆ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರೆ, ಮಾಜಿ ಸಚಿವ ರಾಜೂಗೌಡ ಅವರು ನೆಲಹಾಸಿನ ಮೇಲೆ ಕುಳಿತುಗೊಂಡು ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಿದ್ದು ಯುವಕರ ಕಣ್ಮನ ಸೆಳೆಯಿತು.
ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾದ ಶೋಭಯಾತ್ರೆಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮವನ್ನು ಕೊಡೇಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಂತಹ ಜನತೆ ಹಾಗೂ ವಿಶೇಷವಾಗಿ ಮುಸ್ಲಿಂ ಸಹೋದರರು ಸಹಿತ ಸೇರಿದಂತೆ ರಾಮಭಕ್ತರು ಸೇರಿ ಬಸವೇಶ್ವರ ದೇವಸ್ಥಾನದಲ್ಲಿ ನಿಯೋಜಿತಗೊಳಿಸಿದ್ದ ಎಲ್‌ಇಡಿ ಪರದೆಯಲ್ಲಿ ನೇರಪ್ರಸಾರ ವೀಕ್ಷಿಸುವ ಮೂಲಕ ಭಕ್ತಿ ಮೆರೆದರು. ನಂತರ ರಾಮೋತ್ಸವ ಶೋಭಯಾತ್ರೆಗೆ ಬಂದಂತಹ ಭಕ್ತಾದಿಗಳು ಪ್ರಸಾದ ಸೇವಿಸಿ ಪುನೀತರಾದರು. ಕೊಡೇಕಲ್ ಆರಕ್ಷಕ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.