- ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅಭಿಮತ
----ಕನ್ನಡಪ್ರಭ ವಾರ್ತೆ ಮೈಸೂರು
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳ ಮೇಲೆ ಲೆನಿನ್ ಪ್ರಭಾವ ಅಪಾರವಾಗಿತ್ತು ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದರು.ನಗರದ ಎಐಡಿಎಸ್‌ಒ ಕಚೇರಿಯಲ್ಲಿ ಭಾನುವಾರ ನಡೆದ ರಷ್ಯಾ ಸಮಾಜವಾದಿ ಕ್ರಾಂತಿಯ ಶಿಲ್ಪಿ, ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ ಅವರ ಮರಣ ಶತಾಬ್ಧಿ ಪ್ರಯುಕ್ತ ಸ್ಮರಣ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ನೇತಾಜಿಯವರು ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿದ್ದ ಲೆನಿನ್ ಅವರ ವಿಚಾರಧಾರೆಗೆ ಆಕರ್ಷಿತರಾಗಿ, ದುಡಿಯುವ ಜನರ ವಿಮುಕ್ತಿಗೆ, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೇ ಪರ್ಯಾಯ ಎಂದು ಆಳವಾಗಿ ನಂಬಿದ್ದರು ಎಂದರು.
ರಷ್ಯಾದಲ್ಲಿದ್ದ ಝಾರ್ ವ್ಯವಸ್ಥೆಯ ವಿರುದ್ಧ ಯಶಸ್ವಿ ಹೋರಾಟ ನಡೆಸಿ, ಕೆಲವೇ ತಿಂಗಳ ಬಳಿಕ ತುಳಿತಕ್ಕೊಳಗಾಗಿದ್ದ ಕಾರ್ಮಿಕ ವರ್ಗವನ್ನು ಸಂಘಟಿಸಿ, ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿ, ರೋಗಗ್ರಸ್ತವಾಗಿದ್ದ ರಷ್ಯಾ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ದು, ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ನಾಯಕ ಲೆನಿನ್ ಎಂದು ಅವರು ಹೇಳಿದರು.ಎಲ್ಲರಿಗೂ ಉಚಿತ ಶಿಕ್ಷಣ, ದುಡಿಯುವ ಕೈಗಳಿಗೆ ಉದ್ಯೋಗ, ವೇಶ್ಯಾವಾಟಿಕೆಯನ್ನು ತೊಡೆದು ಹಾಕಿ ಹೆಣ್ಣು ಮಕ್ಕಳು ಘನತೆ ಗೌರವದಿಂದ ಬದುಕುವ ವ್ಯವಸ್ಥೆಯನ್ನು ನಿರ್ಮಿಸಿ, ಇಡೀ ಪ್ರಪಂಚಕ್ಕೆ ಸಮಾಜವಾದಿ ವ್ಯವಸ್ಥೆಯ ಯಶಸ್ಸನ್ನು ಅನಾವರಣಗೊಳಿಸಿದರು ಎಂದು ಅವರು ತಿಳಿಸಿದರು.
ಪ್ರಸ್ತುತ ನಮ್ಮ ದೇಶವು ಕೂಡ ಬಂಡವಾಳಶಾಹಿ ವ್ಯವಸ್ಥೆಯಾಗಿದ್ದು, ಕಿತ್ತು ತಿನ್ನುವ ಬಡತನ, ಹಸಿವು, ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ, ರೈತ- ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ನಲುಗಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಲೆನಿನ್ ಅವರ ವಿಚಾರಗಳು ಅತ್ಯಂತ ಪ್ರಸ್ತುತವಾಗಿದ್ದು, ವಿದ್ಯಾರ್ಥಿಗಳು ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದ ಮೂಲಭೂತ ಬದಲಾವಣೆಗೆ ಸನ್ನದ್ಧರಾಗಬೇಕು ಎಂದು ಅವರು ಕರೆ ನೀಡಿದರು.ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್, ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷರಾದ ನಿತಿನ್, ಸ್ವಾತಿ, ಕಾರ್ಯಕರ್ತರಾದ ಚೈತ್ರಾ, ಚಂದ್ರಿಕಾ, ಹೇಮಾಲತಾ, ಚಂದನ ಮೊದಲಾದವರು ಇದ್ದರು.