ಕೇಂದ್ರ-ರಾಜ್ಯ ಸರ್ಕಾರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Aug 6, 2024 12:37 AM

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಮತ್ತು ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದ್ದು, ಕೇವಲ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ನೀಡಿದೆ.

ಸಿದ್ದರಾಮಯ್ಯನವರು 2ನೇ ಬಾರಿ ಅಧಿಕಾರ ವಹಿಸಿಕೊಂಡಾಗ ಕೃಷಿಕ ಸಮುದಾಯ ಬಹಳಷ್ಟು ನೀರಿಕ್ಷೆ ಇಟ್ಟುಕೊಂಡಿತ್ತು. ಅದು ಈಗ ಹುಸಿಯಾಗಿದೆ. ಹೀಗಾಗಿ ರೈತರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಕಿಡಿಕಾರಿದ ಅವರು, ಕನಕಗಿರಿ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು, ಕೆರೆ ತುಂಬಿಸುವ ಯೋಜನೆ ಇಲ್ಲಿನ ಜನರಿಗೆ ವರವಾಗಿದೆ. ತುಂಗಭದ್ರಾ ಜಲಾಶಯ ತುಂಬಿ ಲಕ್ಷಾಂತರ ಕ್ಯುಸೆಕ್‌ ನೀರು ಸಮುದ್ರ ಸೇರುತ್ತಿದ್ದರೂ ಕೆರೆಗೆ ನೀರು ಬರುತ್ತಿಲ್ಲ. ಉಸ್ತುವಾರಿ ಸಚಿವ ತಂಗಡಗಿಯವರು ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕನಕಗಿರಿ ತಾಲೂಕಾಗಿ ಆರು ವರ್ಷವಾದರೂ ಸರಿಯಾದ ಕಚೇರಿಗಳು ಆರಂಭವಾಗಿಲ್ಲ. ಜನರು ಎಲ್ಲದಕ್ಕೂ ಗಂಗಾವತಿಗೆ ಅಲೆದಾಡುತ್ತಿದ್ದಾರೆ. ಹತ್ತಾರು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇನ್ನೂ ಕೆಲ ಕಚೇರಿಗಳು ತಾಲೂಕು ಕೇಂದ್ರಕ್ಕೆ ಬಂದಿಯೇ ಇಲ್ಲ. ಒಣಭೂಮಿ ತಾಲೂಕಾಗಿರುವ ಕನಕಗಿರಿಯಲ್ಲಿ ಬಾಕಿ ಉಳಿದ ಸರ್ಕಾರಿ ಕಚೇರಿಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಜೋಗದ್ ದುರುಗಪ್ಪ ನಾಯಕ, ಫಯಾಜ್ ಮೈಸೂರು, ಮರಿಯಪ್ಪ ಸಾಲೋಣಿ, ರಾಮಣ್ಣ ಜಾಡಿ,

ಹನುಮೇಶ ವರ್ಣಖೇಡ, ಹಂಪೇಶ ಹರಿಗೋಲ, ಮಹಿಳಾ ಘಟಕದ ಮುಖಂಡರಾದ ನಾಗರತ್ನ ಸೇರಿದಂತೆ ಇತರರು ಇದ್ದರು.

Share this article