ಡಿವಿ ರಮೇಶ್ ಕುಮಾರ್
ನಿಯಮದ ಪ್ರಕಾರ ವಾರ್ಡನ್ ಅವರು ಪ್ರತಿದಿನ ಶಾಲೆಯಲ್ಲಿ ಹಾಜರಿದ್ದು, ಮಕ್ಕಳ ಊಟ, ವಸತಿ ಮತ್ತು ಶಿಕ್ಷಣದ ಮೇಲ್ವಿಚಾರಣೆ ಮಾಡಬೇಕು. ಆದರೆ ನಲ್ಲಗುಟ್ಲಪಲ್ಲಿ ಶಾಲೆಯ ವಾರ್ಡನ್ ಅವರು ಶಾಲೆಗೆ ಬರುವುದು ಅತ್ಯಂತ ವಿರಳ ಎಂಬುದು ಸ್ಥಳೀಯರ ದೂರು. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಬಂದು ಹಾಜರಾತಿ ಪುಸ್ತಕದಲ್ಲಿ ಹಿಂದಿನ ದಿನಾಂಕಗಳಿಗೆ ಏಕಕಾಲಕ್ಕೆ ಸಹಿ ಮಾಡಿ ಹೋಗುವ ಸಂಸ್ಕೃತಿ ಇಲ್ಲಿ ಮನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಾರ್ಡನ್ ಅವರ ಈ ಅನುಪಸ್ಥಿತಿಯ ಲಾಭವನ್ನೇ ಬಳಸಿಕೊಂಡು ಅಡುಗೆಯವರು ಶಿಕ್ಷಕಿಯ ಅವತಾರ ಎತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಮಕ್ಕಳ ಗೋಳು ಕೇಳುವವರೇ ಇಲ್ಲ:
ವಾರ್ಡನ್ ಶಾಲೆಯಲ್ಲಿ ಇಲ್ಲದ ಕಾರಣ, ಮಕ್ಕಳಿಗೆ ಏನಾದರೂ ಅನಾರೋಗ್ಯ ಉಂಟಾದರೆ ಅಥವಾ ರಾತ್ರಿ ವೇಳೆ ತುರ್ತು ತೊಂದರೆಯಾದರೆ ಜವಾಬ್ದಾರಿ ತೆಗೆದುಕೊಳ್ಳುವವರೇ ಇಲ್ಲದಂತಾಗಿದೆ. ಅಡುಗೆ ಕೆಲಸ ಮಾಡಬೇಕಾದವರೇ ಪಾಠ ಮಾಡುತ್ತಿರುವುದರಿಂದ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ಸಿಗುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಮೌನದ ವಿರುದ್ಧ ಆಕ್ರೋಶ:ಇಷ್ಟೆಲ್ಲಾ ಅವ್ಯವಸ್ಥೆಗಳ ಬಗ್ಗೆ ಪತ್ರಿಕೆಗಳು ವರದಿ ಮಾಡುತ್ತಿದ್ದರೂ, ತಾಲೂಕು ಅಧಿಕಾರಿಗಳು ಮತ್ತು ಬಿಇಓ ಅವರು ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಿರಿಯ ಅಧಿಕಾರಿಗಳ ಈ ಮೌನವೇ ವಾರ್ಡನ್ ಅವರ ಗೈರು ಹಾಜರಿಗೆ ಕುಮ್ಮಕ್ಕು ನೀಡಿದಂತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್...ಸರ್ಕಾರಿ ಆಶ್ರಮ ಶಾಲೆ ಎಂದರೆ ಅದು ಅನಾಥ ಮಕ್ಕಳ ಮನೆ ಇದ್ದಂತೆ. ಆದರೆ ಇಲ್ಲಿ ವಾರ್ಡನ್ ಅವರೇ ಅತಿಥಿಯಂತೆ ಬಂದು ಹೋಗುತ್ತಿರುವುದು ದುರಂತ. ಅಡುಗೆಯವರು ಪಾಠ ಮಾಡುತ್ತಿರುವುದು ಗೊತ್ತಿದ್ದರೂ ವಾರ್ಡನ್ ಸುಮ್ಮನಿರುವುದು ನೋಡಿದರೆ ಇಲ್ಲಿ ವ್ಯವಸ್ಥಿತ ಅಕ್ರಮ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು.
- ಸ್ಥಳೀಯ ನಿವಾಸಿಗಳು, ನಲ್ಲಗುಟ್ಲಪಲ್ಲಿ.