ಕಳಸ-ಕಾರ್ಕಳ ಇಮ್ಮಡಿ ಭೈರರಸನ ಶಾಸನದ ಮರು ಅಧ್ಯಯನ

KannadaprabhaNewsNetwork | Published : Jul 12, 2024 1:33 AM

ಸಾರಾಂಶ

ಈ ಶಾಸನದ ಅಧ್ಯಯನವನ್ನು ಈ ಮೊದಲು ಮಾಡಿದ್ದರೂ ಸಹ ಕಾಲಮಾನದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಅಧ್ಯಯನಕ್ಕೊಳಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದಲ್ಲಿನ ಕುಸುಮ ಶೆಟ್ಟಿ ಅವರ ಗದ್ದೆಯ ಬದುವಿನಲ್ಲಿರುವ ಇಮ್ಮಡಿ ಭೈರರಸನ ಶಾಸನವನ್ನು ಇತ್ತೀಚೆಗೆ ಮರು ಅಧ್ಯಯನಕ್ಕೊಳಪಡಿಸಲಾಗಿದೆ.

ಈ ಶಾಸನದ ಅಧ್ಯಯನವನ್ನು ಈ ಮೊದಲು ಮಾಡಿದ್ದರೂ ಸಹ ಕಾಲಮಾನದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಅಧ್ಯಯನಕ್ಕೊಳಪಡಿಸಿದ್ದಾರೆ.

ಈ ಶಾಸನವನ್ನು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವಿದ್ದು, 16ನೇ ಶತಮಾನದ ಕನ್ನಡ ಲಿಪಿ‌ಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು, ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.

ಜಿನ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನವು 1452 (ಸಾಮಾನ್ಯ ವರ್ಷ 1530) ರ ವಿಕೃತಿ ಸಂವತ್ಸರದ ಮಕರ ಮಾಸ ಶುದ್ಧ 15ನೇ ಆದಿವಾರಕ್ಕೆ ಸೇರುತ್ತದೆ. ಈ ಮೊದಲ ಅಧ್ಯಯನದಲ್ಲಿ ಶಕವರ್ಷ 1442 ವಿಕ್ರಮ ಸಂವತ್ಸರ ಎಂದು ಓದಲಾಗಿತ್ತು.

ಈ ಶಾಸನದ ಕಾಲದಲ್ಲಿ ಕಳಸ - ಕಾರ್ಕಳದಲ್ಲಿ ಭೈರರಸ ರಾಣಿ ಬೊಮ್ಮಲದೇವಿಯ ಪುತ್ರ ಇಮ್ಮಡಿ ಭೈರರಸನು ರಾಜ್ಯಭಾರ ಮಾಡುತ್ತಿದ್ದನು. ಮುಡಾಳಿಯವರು ಕಾರ್ಕಳದಲ್ಲಿನ ಅಜಿತನಾಥ (ಜೈನ ತೀರ್ಥಂಕರ) ದೇವರ ಅಮೃತಪಡಿಗೆ ಬಿಟ್ಟ ಭೂಮಿಯಲ್ಲಿ ಉತ್ಪತ್ತಿಯು ಕಡಿಮೆಯಾದಾಗ ಅದಕ್ಕೆ ಪ್ರತಿಯಾಗಿ ಇಮ್ಮಡಿ ಭೈರರಸನು ಕೊಟ್ಟ ಭೂ ದಾನದ ವಿವರವನ್ನು ಶಾಸನವು ಉಲ್ಲೇಖಿಸುತ್ತದೆ.

ಈ ಅಧ್ಯಯನಕ್ಕೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ನಿರ್ದೇಶಕ ಎಸ್.ಎ. ಕೃಷ್ಣಯ್ಯ, ಆದರ್ಶ್ ಶೆಟ್ಟಿ, ಅಕ್ಷಯ್ ಶೆಟ್ಟಿ, ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ., ಶಶಾಂತ್, ಮಂಜುನಾಥ ನಂದಳಿಕೆ ಹಾಗೂ ಸ್ಥಳೀಯರಾದ ರತ್ನಾಕರ್ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ರಾಜೀವಿ ಶೆಟ್ಟಿ ಸಹಕಾರ ನೀಡಿದ್ದರು.

Share this article