ಕನ್ನಡಪ್ರಭ ವಾರ್ತೆ ಮಂಡ್ಯ
ಆರಂಭದ ದಿನ 1.25 ಲಕ್ಷ ಜನರು ಮೇಳವನ್ನು ವೀಕ್ಷಿಸಿದರೆ ಎರಡನೇ ದಿನ 3.75 ಲಕ್ಷ ಜನರು ಆಗಮಿಸಿದ್ದರು. ಕೊನೆ ದಿನವಾದ ಭಾನುವಾರ 4 ಲಕ್ಷ ದಷ್ಟು ಜನರು ಕೃಷಿ ಮೇಳ ವೀಕ್ಷಿಸಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಕೃಷಿ ವಿವಿ ಮೂಲಗಳು ತಿಳಿಸಿವೆ.
ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 5 ಜಿಲ್ಲೆಗಳು ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಪ್ರಗತಿಪರ ರೈತರು, ರೈತ ಮಹಿಳೆಯರು, ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯರು, ವಿವಿಧ ಕಂಪನಿಗಳ ಪ್ರತಿನಿಧಿಗಳು, ಯುವ ರೈತರು ಹಾಗೂ ಸಾರ್ವಜನಿಕರು ಸೇರಿದಂತೆ 10 ಲಕ್ಷ ಜನರು ಮೇಳವನ್ನು ವೀಕ್ಷಿಸಿ ಕೃಷಿ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳ, ಹೊಸ ತಳಿಗಳು, ಹೈಬ್ರಿಡ್ ಬೆಳೆಗಳು, ಹೊಸ ಕೃಷಿ ಯಂತ್ರೋಪಕರಣಗಳು, ಕೀಟಗಳ ಬಗೆಗಿನ ಮಾಹಿತಿ, ಅಂತರ ಬೆಳೆಗಳ ಬಗೆಗಿನ ಪ್ರಾತ್ಯಕ್ಷಿತೆ, ಹೆಚ್ಚು ಇಳುವರಿ ನೀಡುವ ಬೆಳೆಗಳು ಸೇರಿದಂತೆ ವಿವಿಧ ಮಾದರಿಯ ಬೆಳೆಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.ದೇಶಿ ತಳಿಯ ಗೋವುಗಳ ಪ್ರದರ್ಶನದೊಂದಿಗೆ ಅವುಗಳ ಮಹತ್ವ, ಗೋ ಉತ್ಪನ್ನಗಳ ಮಹತ್ವವನ್ನು ಕೃಷಿ ಮೇಳದಲ್ಲಿ ಪರಿಚಯಿಸಲಾಗಿತ್ತು. ಬೇಗೂರಿನ ಶ್ರೀ ಕೃಷ್ಣ ಗೋಶಾಲೆಯವರು ಗುಜರಾತ್ ಮೂಲದ ಗಂಗಾತೀರ, ಕಾಂಕ್ರೇಜ್, ತಾರ್‌ಪಾರ್‌ಕಾರ್, ಕಿಲಾರಿ, ಪಂಚ ಕಲ್ಯಾಣಿ ಜಫಾರಾಬಾದಿ ಎಮ್ಮೆ, ರಾಠಿ, ಮಹಾರಾಷ್ಟ್ರ ಮೂಲದ ಢಾಂಗಿ ತಳಿಗಳು ರೈತರನ್ನು ವಿಶೇಷವಾಗಿ ಆಕರ್ಷಿಸಿದವು.
45 ಭತ್ತದ ತಳಿಗಳು, 3 ಹೈಬ್ರೀಡ್, 50 ತಾಂತ್ರಿಕತೆಗಳು, ಕಬ್ಬಿನಲ್ಲಿ 17 ತಳಿಗಳು, 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ 4 ತಳಿಗಳು, ಮೇವಿನ ಬೆಳೆಗಳಲ್ಲಿ 4, ಸೂರ್ಯಕಾಂತಿ ಸಂಕರಣ ತಳಿ, ಚಾಮರಾಜನಗರದ ಕಪ್ಪು ಅರಿಶಿಣ ತಳಿಯ ಬೆಳೆಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.
ಮೂರು ದಿನಗಳ ಕಾಲ ಆಯೋಜಿಸಿದ್ದ ಕೃಷಿ ಮೇಳವನ್ನು ನೋಡಲು ಬರುವ ಸಾರ್ವಜನಿಕರಿಗ ನೀಡಲಾಗುತ್ತಿದ್ದ ಊಟಕ್ಕೆ ಸೀಮಿತ ಶುಲ್ಕವನ್ನು ನಿಗದಿಪಡಿಸಲಾಗಿದ್ದಾದರೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಎರಡನೇ ದಿನ ಆಗಮಿಸಿದ್ದ ವೇಳೆ ಆ ಶುಲ್ಕವನ್ನು ತೆರವುಗೊಳಿಸಿ ಒಟ್ಟಾರೆ ಎರಡು ದಿನದ ಊಟದ ವೆಚ್ಚವನ್ನು ತಾವೇ ಭರಿಸುವುದ ಮೂಲಕ ಎಲ್ಲ ಜನರಿಗೆ ಊಟ ಸಿಗುವಂತೆ ಮಾಡಿದ್ದರು.