ಯಲ್ಲಾಪುರ: ತಾಲೂಕಿನಲ್ಲಿ ಒಟ್ಟೂ ೯೪ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುತ್ತಿದ್ದು, ಎಲ್ಲ ಉತ್ಸವವೂ ಮಹತ್ವದ್ದಾಗಿದೆ. ಸಾರ್ವಜನಿಕರ ಮನಸ್ಸಿಗೆ ನೋವಾಗದಂತೆ ಸೌಹಾರ್ದಯುತವಾಗಿ ಉತ್ಸವ ಆಚರಿಸಬೇಕು ಎಂದು ತಹಸೀಲ್ದಾರ್ ಅಶೋಕ ಭಟ್ಟ ಹೇಳಿದರು.
ಗಣಪತಿ ಉತ್ಸವಕ್ಕೆ ಅಗತ್ಯವಾಗಿರುವ ಪರವಾನಗಿ ನೀಡಿಕೆಯನ್ನು ಸಾರ್ವಜನಿಕರ ಆಗ್ರಹದಂತೆ ಸರಳೀಕರಣಗೊಳಿಸಲಾಗಿದೆ. ಪರಸ್ಪರ ಬಾಂಧವ್ಯದಿಂದ ಎರಡೂ ಉತ್ಸವಗಳು ಆಚರಣೆಯಾಗಬೇಕು. ಸಾರ್ವಜನಿಕರ ಭಾವನೆಗೆ ಧಕ್ಕೆಯಾಗದ ರೀತಿ ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಉತ್ಸವವನ್ನು ಆಚರಿಸೋಣ ಎಂದರು.
ಸಿಪಿಐ ರಮೇಶ್ ಹಾನಾಪುರ ಮಾತನಾಡಿ, ಮುಂಬರುವ ಎಲ್ಲ ಹಬ್ಬಗಳ ಮುಂಜಾಗ್ರತೆಯ ನೇತೃತ್ವವನ್ನು ತಹಶೀಲ್ದಾರ್ ಅಶೋಕ ಭಟ್ಟ ಅವರು ವಹಿಸಿಕೊಂಡಿದ್ದಾರೆ. ಹಬ್ಬಗಳು ಕೋಮುವೈಷಮ್ಯಕ್ಕೆ ಎಡೆಕೊಡದೇ ಸಮಾಜಕ್ಕೆ ಮಾದರಿಯಾಗಿರಲಿ. ಯಾರೇ ಆಗಲಿ, ಯಾವುದೋ ಕಾರಣಕ್ಕೆ ಕಾನೂನು ಕೈಗೆತ್ತಿಕೊಳ್ಳಬಾರದು. ಕೇವಲ ಪೊಲೀಸ್ ಇಲಾಖೆಯೊಂದರಿಂದಲೇ ಶಾಂತಿ-ಸೌಹಾರ್ದ ಸಾಧ್ಯವಾಗದು. ಉತ್ಸವಗಳ ಸಂದರ್ಭದಲ್ಲಿ ಎಲ್ಲಾದರೂ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಎಂದರು.ಪಪಂ ಮುಖ್ಯಾಧಿಕಾರಿ ಸುನೀಲ್ ಗಾವಡೆ ಮಾತನಾಡಿ, ಉತ್ಸವಗಳಲ್ಲಿ ಬಳಸುವ ಪಟಾಕಿಗೆ ಮಿತಿ ಇರಲಿ. ಬಳಸುವ ಪಟಾಕಿಯ ಬದಲಿಗೆ ಅದೇ ಹಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಟ್ಟಿ, ಪೆನ್ನು ಕೊಡಿಸಿ. ಮುಖ್ಯವಾಗಿ ಉತ್ಸವದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಜಿಸಿ ಎಂದರು.
ಹೆಸ್ಕಾಂ ಅಭಿಯಂತರ ರಮಾಕಾಂತ ನಾಯ್ಕ, ಅಗ್ನಿಶಾಮಕ ಠಾಣಾಧಿಕಾರಿ ಶಂಕ್ರಪ್ಪ ಅಂಗಡಿ, ಡಿ.ಆರ್.ಎಫ್.ಓ. ಶರಣ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಅರವಿಂದ, ಸಾರ್ವಜನಿಕರ ಪರವಾಗಿ ನಾಗರಾಜ ಮದ್ಗುಣಿ, ಜಿ.ಎನ್. ಭಟ್ಟ ತಟ್ಟೀಗದ್ದೆ, ಕೇಬಲ್ ನಾಗೇಶ, ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಸಲಹೆ, ಸೂಚನೆಗಳನ್ನು ನೀಡಿದರು.
ಪಿಎಸ್‌ಐ ಸಿದ್ದಪ್ಪ ಗುಡಿ ಸ್ವಾಗತಿಸಿದರು. ರೇಖಾ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.